ಮೈಸೂರು

ಸಿದ್ದರಾಮಯ್ಯನವರು ಯಾವ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಗೊತ್ತಿಲ್ಲ : ಸಂಸದ ಪ್ರತಾಪ್ ಸಿಂಹ

ಮೈಸೂರು,ಮೇ.19:-  ಸಿದ್ದರಾಮಯ್ಯನವರು ಯಾವ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂದು ನನಗಂತೂ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನಲ್ಲಿಂದು ಸಿದ್ದರಾಮಯ್ಯನವರು ಮತ್ತೊಮ್ಮೆ ಸಿಎಂ ಆದರೆ ದಲಿತರ ಸಾಲವನ್ನು ಮನ್ನಾ ಮಾಡುತ್ತೇನೆ ಎಂದಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ಏನು ಮಾಡಿದರು? ಅವರು ದಲಿತರಿಗೆ ಮಾಡಿರುವುದು, ದಲಿತ ಸಮುದಾಯಕ್ಕೆ ಸಿದ್ದರಾಮಯ್ಯನವರು ಕೊಟ್ಟಿರುವುದು 2013ರಲ್ಲಿ ದಲಿತ ಸಮುದಾಯಕ್ಕೆ ಸೇರಿದ ಜಿ.ಪರಮೇಶ್ವರ್ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಅದನ್ನು ತನ್ನ ಸಮುದಾಯದವರನ್ನು ಎತ್ತಿಕಟ್ಟಿ ಅವರನ್ನು ಸೋಲಿಸಿ ಅವರ ರಾಜಕೀಯ ಜೀವನವನ್ನು ಅಂತ್ಯ ಮಾಡಲು ಪ್ರಯತ್ನಿಸಿದ್ದೇ ಸಿದ್ದರಾಮಯ್ಯನವರು ದಲಿತ ಸಮುದಾಯಕ್ಕೆ ಕೊಟ್ಟ ಕೊಡುಗೆ ಎಂದು ವ್ಯಂಗ್ಯವಾಡಿದರು.

ಅದಾದ ನಂತರ ಜಿ.ಪ ರಮೇಶ್ವರ್ ಅವರು ಅಂಗಲಾಚಿದರೂ ಕೂಡ ಅವರಿಗೆ ಮಂತ್ರಿ ಸ್ಥಾನವನ್ನೂ ಕೊಡದೇ, ಅವರು ಉಪಮುಖ್ಯಮಂತ್ರಿಯನ್ನಾದರೂ ಮಾಡಿಕೊಳ್ಳಿ ಎಂದು ಬೇದಿಕೊಂಡರೂ ಕೂಡ ಕೊಡದೆ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದೇ ಸಿದ್ದರಾಮಯ್ಯನವರು. ಮೈಸೂರಿನಲ್ಲಿ ಸೋತ ನಂತರ ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಅವಕಾಶ ಲಭ್ಯವಾಯಿತು. 2019ರ ಚುನಾವಣೆಯಲ್ಲಿ ಕೋಲಾರದಲ್ಲಿ ಮುನಿಯಪ್ಪನವರನ್ನು, ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜಕೀಯವಾಗಿ ಮುಗಿಸಿದ್ದೇ ಸಿದ್ದರಾಮಯ್ಯನವರು ದಲಿತ ಸಮುದಾಯಕ್ಕೆ ಕೊಟ್ಟಂತಹ ಕೊಡುಗೆ. ದಲಿತ ಸಮಾಜ ಪ್ರಜ್ಞಾವಂತ ಸಮಾಜ. ಅವರಿಗೆ ಗೊತ್ತಿದೆ. ವೋಟಿನ ರಾಜಕಾರಣಕ್ಕೋಸ್ಕರ ಸಿದ್ದರಾಮಯ್ಯನವರ ಪ್ರೀತಿ, ಅಚಲ ವಿಶ್ವಾಸ,  ಅಪಾರವಾದ ಕಾಳಜಿ ಇದ್ದರೆ ಅದು ಮುಸ್ಲಿಂರಿಗೆ ಎಂದು ದಲಿತರಿಗೆ ಗೊತ್ತಾಗಿದೆ ಎಂದರು.

ಟಿಪ್ಪು ಸುಲ್ತಾನ್ ಮೈಸೂರು ಹುಲಿಯಾಗಿದ್ದು ಯಾವಾಗ? ಯಾವ ಹುಲಿ ಕೊದ್ದಿದ್ದನಂತೆ, ಹುಲಿ ಹಿಡ್ಕಂಡು ಕುಸ್ತಿ ಆಡೋದೆಲ್ಲ ಪೋಸ್ಟರ್ ಗಳನ್ನು ಹಾಕಿಬಿಟ್ಟರೆ ಮೈಸೂರು ಹುಲಿಯಾಗ್ತಾನಾ? ಟಿಪ್ಪು ಸುಲ್ತಾನ್ ಮೈಸೂರು ಹುಲಿಯಾಗೋದಾದರೆ ಮೂರನೇ ಆಂಗ್ಲೋ ಮೈಸೂರು ಯುದ್ಧ, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಹೋರಾಟ ಮಾಡಿದ. ಟಿಪ್ಪು ಸುಲ್ತಾನ್ ಕೋಟೆಯೊಳಗಡೆ ಸತ್ತಿದ್ದು, ಬೋನೊಳಗಡೆ ಹುಲಿ ಸತ್ತಿದ್ದನ್ನು ಹುಲಿ ಅಂತ ಹೇಳಲ್ಲ. ಟಿಪ್ಪು ಸತ್ತಿದ್ದು ಕೋಟೆಯೊಳಗಡೆ. ಯುದ್ಧ ಮಾಡಿಲ್ಲ. ಯಾವ ಯುದ್ಧ ಗೆದ್ದಿದ್ದಾನೆ. ಯಾರೋ ನಾಲ್ಕು ಜನ ಹೇಳಿ ಹುಲಿ ಹುಲಿ ಅಂತ ವೈಭವೀಕರಿಸಿ ಬರೆಯುತ್ತಿದ್ದರು. ಟಿಪ್ಪು ಹುಲಿಯಲ್ಲ. ನಮ್ಮ ಮೈಸೂರಿಗೆ ಹುಲಿ ಏನಿದ್ದರೂ ನಾಲ್ವಡಿ ಕೃಷ್ಣರಾಜ ಒಡೆಯರೇ, ಅವರು ಮೈಸೂರು ಹುಲಿಯಾಗಿದ್ದಕ್ಕೆ ಕನ್ನಂಬಾಡಿ ಅಣೆಕಟ್ಟೆ ಕಟ್ಟಿದ್ದಾರೆ. ದಲಿತ ಸಮುದಾಯಕ್ಕೆ ಮೀಸಲಾತಿ ಕೊಟ್ಟವರು ನಾಲ್ವಡಿ ಕೃಷ್ಣರಾಜ ಒಡೆಯರ್  ಅವರೇ ಹೊರತು ಟಿಪ್ಪು ಸುಲ್ತಾನ್ ಯಾವ ಹುಲಿನೂ ಅಲ್ಲ ಎಂದರು.ಸಿದ್ದರಾಮಯ್ಯನವರಿಗೆ ಹುಲಿ ತರ ಕಾಣಿಸಬಹುದು ಎಂದರು.

ಮೈಸೂರು ರಸ್ತೆಯಲ್ಲಿ ಗುಂಡಿ ಕುರಿತು ಪ್ರತಿಕ್ರಿಯಿಸಿ ಗುಂಡಿ ಸಂಬಂಧಪಟ್ಟವರ ಜೊತೆ ಮಾತಾಡಿದ್ದೇನೆ ಯುಡಿಜಿಗೆ ಜಾಗ ಅಗೆದಾಗ ಕೂಡಲೇ ದುರಸ್ತಿ ಪಡಿಸುವ ಸಾಮಾನ್ಯ ಜ್ಞಾನ ಇಲ್ಲವಾ? ನಿಮ್ಮ ಏರಿಯಾದಲ್ಲಿ ಕಸ ತೆಗೆದಿಲ್ಲವಾ? ರಸ್ತೆಯಲ್ಲಿ ಗುಂಡಿ ಬಿದ್ದಿದೆಯಾ? ಸಮಸ್ಯೆ ಇದ್ದರೆ ನಿಮ್ಮ ನಿಮ್ಮ ವ್ಯಾಪ್ತಿಯ ಪಾಲಿಕೆ ಸದಸ್ಯರ ಮನೆಯ ಮುಂದೆ ಧರಣಿ ನಡೆಸಿ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: