ಮೈಸೂರು
ಕೋವಿಡ್ ನಿರ್ವಹಣೆ ಹಣದಲ್ಲಿ ರಾಜ್ಯಸರ್ಕಾರ 4ಸಾವಿರ ಕೋಟಿ ಹಣ ಲೂಟಿ ಹೊಡೆಯಲಾಗಿದೆ : ಎಂ.ಲಕ್ಷ್ಮಣ ಆರೋಪ
ಮೈಸೂರು, ಮೇ.19:- ಕೊರೊನಾ ನಿರ್ವಹಣೆ ಮಾಡಲು 8,500 ಕೋಟಿ ಹಣ ಖರ್ಚು ಮಾಡಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ ಇದರಲ್ಲಿ 4 ಸಾವಿರ ಕೋಟಿ ಹಣವನ್ನು ಲೂಟಿ ಹೊಡೆಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಳ್ಳು ಬಿಲ್ ಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಲಪಟಾಯಿಸಲಾಗಿದೆ. ಬಿಜೆಪಿ ಮುಖಂಡರಾದ ಸತೀಶ್ ರೆಡ್ಡಿ, ಅರವಿಂದ ಲಿಂಬಾವಳಿಗೆ ಸಂಬಂಧಿಸಿದ ಹೋಟೆಲ್ ಗಳಿಂದ ಕಾರ್ಮಿಕರಿಗೆ ಊಟ ನೀಡಿರುವ ಕುರಿತು ನಕಲಿ ಬಿಲ್ ಗಳನ್ನು ಸೃಷ್ಟಿಸಿ ಹಣ ಹೊಡೆಯಲಾಗಿದೆ. ಸುಮಾರು 8,500 ಕೋಟಿ ಪೈಕಿ 4 ಸಾವಿರ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದನಂತರ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರಾಜ್ಯ ಬಿಜೆಪಿ ಸರ್ಕಾರದ ಮಂತ್ರಿಗಳು ಎಸಗಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಈಗಾಗಲೇ ಜನರ ಮುಂದಿಟ್ಟಿದ್ದೇವೆ. ಇದೀಗ ಗಂಗಾ ಕಲ್ಯಾಣ ಯೋಜನೆಯಲ್ಲೂ ಭ್ರಷ್ಟಾಚಾರ ನಡೆದಿದೆ. ದಲಿತರಿಗೆ ಮೀಸಲಿಟ್ಟಿರುವ ಯೋಜನೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಹಿಂದುಳಿದ ವರ್ಗದವರಿಗೆ ಬೋರ್ ವೆಲ್ ಕೊರೆಯುವ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಬೋರ್ ವೆಲ್ ಕೊರೆಯುವ ಗುತ್ತಿಗೆಯನ್ನು ಅನರ್ಹರಿಗೆ ನೀಡಲಾಗಿದೆ. ರಾತ್ರೋರಾತ್ರಿ ಬೋರ್ ವೆಲ್ ಗಳನ್ನು ಕೊರೆದಿರುವ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ. ಒಂದು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಬೋರ್ ವೆಲ್ ಕೊರೆದಿರುವ ಬಗ್ಗೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಇದು ಸರ್ಕಾರದ ವ್ಯವಸ್ಥಿತ ಭ್ರಷ್ಟಾಚಾರ ಆಗಿದೆ.ಇದರಲ್ಲಿ ಮಂತ್ರಿಗಳು, ಶಾಸಕರು, ಆರ್ ಎಸ್ ಎಸ್ ಮುಖಂಡರು ಭಾಗಿಯಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಎರಡೂವರೆ ವರ್ಷಗಳಲ್ಲಿ ಗೋವಿಂದ ಕಾರಜೋಳ, ಶ್ರೀರಾಮುಲು ನಂತರ ಇದೀಗ ಕೋಟಾ ಶ್ರೀನಿವಾಸ ಪೂಜಾರಿ ಮಂತ್ರಿಗಳಾಗಿದ್ದಾರೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಗೆ ದೂರು ದಾಖಲಿಸಿದ್ದೇವೆ. ಇಷ್ಟೆಲ್ಲಾ ನಕಲಿ ನಡೆಯುತ್ತಿದ್ದರೂ ಟೆಂಡರ್ ಪರಿಶೀಲನಾ ಸಮಿತಿಯಲ್ಲಿ ಪರಿಶೀಲಿಸದೇ ಟೆಂಡರ್ ನೀಡಿದ್ದಾರೆ. ಇವರಿಗೆ 40% ಕಮಿಷನ್ ನೀಡಿರುವುದರಿಂದ ಸುಮ್ಮನಿದ್ದಾರೆ. ಈ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿರುವ ಪ್ರಕರಣ ಬೆಳಕಿಗೆ ಬಂದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ ಬಹಿರಂಗವಾಗಿ ಬಂದೂಕು ತರಬೇತಿ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ.ಆದರೂ ಈ ಬಗ್ಗೆ ಸ್ಥಳೀಯ ಶಾಸಕ ಕೆ ಜಿ ಬೋಪಯ್ಯ ಉಡಾಫೆಯ ಉತ್ತರ ನೀಡಿದ್ದಾರೆ.ಅದೇ ಬೇರೆ ಸಮುದಾಯದವರು ಈ ರೀತಿ ಮಾಡಿದ್ದರೆ ರಾಜ್ಯದಾದ್ಯಂತ ಬೊಬ್ಬೆ ಹೊಡೆಯುತ್ತಿದ್ದರು ಎಂದು ಹರಿಹಾಯ್ದರು.
ನಗರ ಪಾಲಿಕೆ ಸದಸ್ಯರ ಕತ್ತಿನ ಪಟ್ಟಿ ಹಿಡಿದು ಕೇಳುವಂತೆ ಕರೆ ನೀಡಿರುವ ಸಂಸದ ಪ್ರತಾಪ್ ಸಿಂಹ ವಿರುದ್ದ ಕಿಡಿಕಾರಿದ ಅವರು ಎಲ್ಲವನ್ನೂ ಇವರೇ ಹೊತ್ತುಕೊಂಡಿರುವಂತೆ ಪ್ರತಾಪ್ ಸಿಂಹ ವರ್ತಿಸುತ್ತಿದ್ದಾರೆ. ನಗರ ಪಾಲಿಕೆ ಸದಸ್ಯರು ಕೂಡ ಇವರಂತೆಯೇ ಜನಪ್ರತಿನಿಧಿಗಳು. ಸ್ಥಳೀಯ ಜನಪ್ರತಿನಿಧಿಗಳ ವಿರುದ್ದ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)