ಮೈಸೂರು

ಅಮೃತ ವಿಶ್ವವಿದ್ಯಾಪೀಠಂನಲ್ಲಿ ‘ಸ್ಕಿಲ್ ಅಪ್ ವಿತ್ ಬಡೆಕ್ಕಿಲ ಪ್ರದೀಪ್ʼ: ನಿರೂಪಣೆ ಮತ್ತು ಹಿನ್ನೆಲೆ ಧ್ವನಿ ಕಾರ್ಯಾಗಾರ

ಮೈಸೂರು,ಮೇ.20:-  ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್‍ ನ ದೃಶ್ಯ ಸಂವಹನ ವಿಭಾಗವು ನಿರೂಪಣೆ ಮತ್ತು ಹಿನ್ನೆಲೆ ಧ್ವನಿ ಕುರಿತ ʼಸ್ಕಿಲ್ ಅಪ್ ವಿತ್ ಬಡೆಕ್ಕಿಲ ಪ್ರದೀಪ್ʼ ಕಾರ್ಯಾಗಾರವನ್ನು ಆಯೋಜಿಸಿತ್ತು.

ಕನ್ನಡದ ಖ್ಯಾತ ವಾಹಿನಿ ಕಲರ್ಸ್ ಕನ್ನಡದ ಅಧಿಕೃತ ಧ್ವನಿ ಹಾಗೂ ಜನಪ್ರಿಯ ರಿಯಾಲಿಟಿ ಶೋ ಬಿಗ್‍ಬಾಸ್‍ನ ಹಿನ್ನೆಲೆ ಧ್ವನಿ ಕಲಾವಿದ ಬಡೆಕ್ಕಿಲ ಪ್ರದೀಪ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಬಡೆಕ್ಕಿಲ ಪ್ರದೀಪ್, ʻಯಾವುದೇ ಕೆಲಸ ಮಾಡಲು ಅದರಲ್ಲಿ ಮುಂದುವರೆಯಲು ಆಸಕ್ತಿ ಇರಬೇಕಾದುದು ತುಂಬಾ ಮುಖ್ಯ. ಆಸಕ್ತಿ ಇದ್ದರೆ ಮಾತ್ರ ಆ ಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ದೊಡ್ಡ ಗುರಿಯನ್ನು ತಲುಪಲು ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನೇರಲೇಬೇಕಾದದ್ದು ಅನಿವಾರ್ಯ. ಅದಕ್ಕೆ ಯಾವುದೇ ಶಾರ್ಟ್‍ಕಟ್ ಇಲ್ಲ. ಇಂದಿನ ಮಾಧ್ಯಮ ಲೋಕ ತುಂಬಾ ಸ್ಪರ್ಧಾತ್ಮಕವಾಗಿ ಬೆಳೆದಿದ್ದು, ಸಾಕಷ್ಟು ಜನ ಪ್ರತಿಭಾವಂತರು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವೃತ್ತಿಗೆ ಸೂಕ್ತವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ತೀರಾ ಅಗತ್ಯʼ ಎಂದರು.

ನಿರೂಪಣೆ ಮತ್ತು ಹಿನ್ನೆಲೆ ಧ್ವನಿ ಬಗ್ಗೆ ಮಾತನಾಡಿದ ಬಡೆಕ್ಕಿಲ ಪ್ರದೀಪ್, ಇಂತಹ ಸೃಜನಾತ್ಮಕ ಕ್ಷೇತ್ರಗಳಲ್ಲಿ ನಾವೇನು ಮಾತನಾಡುತ್ತೇವೆ, ಯಾವ ವಿಷಯಗಳನ್ನು ಮಾತನಾಡುತ್ತೇವೆ ಎಂಬುದಕ್ಕಿಂತ ಹೇಗೆ ಮಾತನಾಡುತ್ತೇವೆ, ವಿಷಯಗಳನ್ನು ಎಷ್ಟು ವಿಶೇಷ ರೀತಿಯಲ್ಲಿ ಪ್ರಸ್ತುತಪಡಿಸುತ್ತೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅದಕ್ಕೆ ತಕ್ಕಂತೆ ಕೌಶಲ್ಯಗಳನ್ನು ಹೊಂದಿರುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಯಶಸ್ಸಿನ ಹಾದಿಯಲ್ಲಿ ಎದುರಿಸಬೇಕಾದ ಅಂಶಗಳ ಬಗ್ಗೆ ಮಾತನಾಡಿದ ಪ್ರದೀಪ್, ʻಯಾವುದೇ ಕೆಲಸವನ್ನು ಆರಂಭಿಸುವುದು, ಅದನ್ನು ಒಂದು ಹಂತಕ್ಕೆ ತರುವುದು ಒಂದು ಹೋರಾಟವೇ ಆಗಿರುತ್ತದೆ. ಆದರೆ ಅದನ್ನು ʼಹೋರಾಟʼ ಎಂದು ತಿಳಿಯದೇ ʼಕಲಿಕೆʼ ಎಂದು ಭಾವಿಸಬೇಕು. ವಿಷಯಗಳನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಯಶಸ್ಸಿನ ಹಾದಿ ಸುಗಮವಾಗುತ್ತದೆ. ಹಾಗೆಯೇ ಎಲ್ಲರ ಯಶಸ್ಸಿನ ಹಾದಿ ವಿಭಿನ್ನವಾದುದು. ಅವರವರ ಸಾಮರ್ಥ್ಯ, ಕೌಶಲ್ಯಗಳಿಗೆ ತಕ್ಕಂತೆ ಯಶಸ್ಸಿನ ಸ್ವರೂಪ ಬೇರೆಯೇ ಆಗಿರುತ್ತದೆ. ಯಶಸ್ಸು ಗಳಿಸುವುದು ಮುಖ್ಯವಲ್ಲ; ಆದರೆ ಅದನ್ನು ಸಾಧಿಸಲು ಪಟ್ಟ ಪರಿಶ್ರಮ, ತಾಳ್ಮೆಗೆ ಇರುವ ಮೌಲ್ಯ ಯಾವತ್ತಿಗೂ ದೊಡ್ಡದುʼ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್‍ನ ಪ್ರಾಂಶುಪಾಲರಾದ ಡಾ.ಜಿ.ರವೀಂದ್ರನಾಥ್, ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಬಾಲಾಡಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ಕಿಲ್ ಅಪ್ ವಿತ್ ಬಡೆಕ್ಕಿಲ ಪ್ರದೀಪ್
ಎರಡು ದಿನಗಳ ನಿರೂಪಣೆ ಮತ್ತು ಹಿನ್ನೆಲೆ ಧ್ವನಿ ಕಾರ್ಯಾಗಾರದಲ್ಲಿ ಬಡೆಕ್ಕಿಲ ಪ್ರದೀಪ್ ಈ ಸೃಜನಾತ್ಮಕ ಕ್ಷೇತ್ರದ ಸಾಕಷ್ಟು ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ನಿರೂಪಣೆ, ನಿರೂಪಣೆಯ ವಿವಿಧ ವಿಧಗಳು, ನಿರೂಪಣೆಗೆ ಬೇಕಾದ ವಿವಿಧ ಕೌಶಲ್ಯ ಹಾಗೂ ಸಾಮಥ್ರ್ಯಗಳು, ನಿರೂಪಣೆಯ ವ್ಯಾಪ್ತಿ, ಭಾಷೆ ಬಳಕೆ, ಆಂಗಿಕ ಭಾಷೆ, ಸ್ಕ್ರಿಪ್ಟ್, ಅಪಿಯರೆನ್ಸ್ ಗೆ ಕೊಡಬೇಕಾದ ಪ್ರಾಮುಖ್ಯತೆ ಮುಂತಾದ ವಿಷಯಗಳ ಬಗ್ಗೆ ವಿವರವಾಗಿ ಮಾತನಾಡಿದರು. ಈ ವಿಷಯಗಳ ಬಗ್ಗೆ ಹೆಚ್ಚಿನ ಸಾಮಥ್ರ್ಯ ಗಳಿಸಲು ವಿದ್ಯಾರ್ಥಿಗಳಿಗೆ ಸೂಕ್ತವಾದ ವಿವಿಧ ಚಟುವಟಿಕೆಗಳು, ಟಾಸ್ಕ್ ಗಳನ್ನು ನೀಡಲಾಗಿತ್ತು. ವಿವಿಧ ಸ್ಕ್ರಿಪ್ಟ್ ಗಳನ್ನು ನೀಡಿ ಹಿನ್ನೆಲೆ ಧ್ವನಿ ನೀಡಲು ತರಬೇತಿ ನೀಡಲಾಯಿತು. ಇಡೀ ಕಾರ್ಯಾಗಾರವು ಪ್ರಾಯೋಗಿಕ ಮಾದರಿಯಲ್ಲಿ ರೂಪಿತವಾಗಿದ್ದು, ಪ್ರತಿಯೊಂದು ವಿಷಯವನ್ನು ವೈವಿಧ್ಯಮಯ ಚಟುವಟಿಕೆಗಳ ಮೂಲಕ ಹೆಳಿಕೊಟ್ಟದ್ದು ವಿಶೇಷ.
ದೇಶದ ವಿವಿಧ ರಾಜ್ಯಗಳ 80ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: