
ಕರ್ನಾಟಕಪ್ರಮುಖ ಸುದ್ದಿ
ಪ್ರತಿಷ್ಠಿತ ಸ್ವೀಟ್ ಅಂಗಡಿಯ ಸಿಹಿತಿಂಡಿಯಲ್ಲಿ ಹುಳುಗಳು : ಅಂಗಡಿ ಮುಚ್ಚಿಸಿ ಮಾಲೀಕರಿಗೆ ನೋಟಿಸ್ ಜಾರಿ
ರಾಜ್ಯ(ಕೊಡಗು),ಮೇ.20 : ಕೊಡಗು ಜಿಲ್ಲೆಯ ಕುಶಾಲನಗರದದ ಪ್ರತಿಷ್ಠಿತ ಸ್ವೀಟ್ ಅಂಗಡಿಯಲ್ಲಿ ಖರೀದಿಸಿದ ಸಿಹಿತಿಂಡಿಯಲ್ಲಿ ಹುಳುಗಳು ಕಂಡುಬಂದಿದ್ದು, ಅಂಗಡಿಯ ವಿರುದ್ಧ ಗ್ರಾಹಕರು ದೂರು ನೀಡಿದ್ದಾರೆ. ಈ ಹಿನ್ನೆಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಂಗಡಿ ಮುಚ್ಚಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೋಮವಾರಪೇಟೆ ರೇಂಜರ್ ಬ್ಲಾಕ್ ನಿವಾಸಿ, ಲೇಖಕಿ ಶರ್ಮಿಳಾ ರಮೇಶ್ ಕುಶಾಲನಗರದ ಸ್ವೀಟ್ಸ್ ಅಂಗಡಿಯಿಂದ ಮೈಸೂರು ಪಾಕ್ ಹಾಗೂ ಬೇಸನ್ ಲಾಡು ಖರೀದಿಸಿದ್ದರು. ಮನೆಗೆ ಬಂದು ಸಿಹಿತಿಂಡಿಯ ಪೊಟ್ಟಣ ತೆರೆದು ನೋಡಿದಾಗ ಅದರಲ್ಲಿ ಹುಳುಗಳು ಕಂಡು ಬಂದಿವೆ. ಬೆಲೆ ಅಧಿಕವಾದರೂ ಹೆಸರಾಂತ ಅಂಗಡಿಯಲ್ಲಿ ತಿಂಡಿ ಚೆನ್ನಾಗಿರುತ್ತದೆ ಎಂದು ಖರೀದಿಸಿದ್ದು, ಕಳಪೆ ಮತ್ತು ಹುಳ ಆಗಿರುವ ತಿಂಡಿಗಳನ್ನು ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಸ್ವೀಟ್ ಮಳಿಗೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶರ್ಮಿಳಾ ರಮೇಶ್ ಕುಶಾಲನಗರ ಪಟ್ಟಣ ಪಂಚಾಯ್ತಿಗೆ ದೂರು ನೀಡಿದ್ದಾರೆ. ಇವರ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಕ್ರಮ ಕೈಗೊಂಡಿರುವ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಅಂಗಡಿ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವವರೆಗೂ ಅಂಗಡಿ ತೆರಯದಂತೆ ಸೂಚಿಸಿ ಅಂಗಡಿಯನ್ನು ಮುಚ್ಚಿಸಿದ್ದಾರೆ.(ಎಸ್.ಎಂ)