
ಮೈಸೂರು
ಸಿನಿರಸಿಕರಿಗೆ ಮನೋರಂಜನೆಯ ಮಹಾಪೂರ ಹರಿಸಿದ್ದ ಒಲಂಪಿಯಾ ಚಿತ್ರಮಂದಿರವಿನ್ನು ಇತಿಹಾಸದ ಪುಟಕ್ಕೆ !?
ಮೈಸೂರು,ಮೇ.20:- ಮೈಸೂರಿನಲ್ಲಿ ಮತ್ತೊಂದು ಚಿತ್ರ ಮಂದಿರ ಇದೀಗ ಇತಿಹಾಸದ ಪುಟ ಸೇರಲಿದೆ. ಮೈಸೂರಿನ ಸಿನಿಪ್ರಿಯರಿಗೆ ಮನೋರಂಜನೆಯ ಮಹಾಪೂರವನ್ನೇ ಹರಿಸಿದ್ದ ಚಿತ್ರಮಂದಿರವೀಗ ತನ್ನ ಪ್ರದರ್ಶನವನ್ನು ನಿಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದೆರಡು-ಮೂರು ವರ್ಷಗಳಿಂದ ಕೊರೋನಾ ಆರ್ಭಟದಿಂದಾಗಿ ಸರ್ಕಾರ ವಿಧಿಸಿದ ನಿರ್ಬಂಧಗಳಿಂದಾಗಿ ಚಿತ್ರಮಂದಿರಗಳು ತೆರೆದಿರಲಿಲ್ಲ. ಇದರಿಂದ ಚಿತ್ರಮಂದಿರದ ಮಾಲಕರು ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಿ ಬಂತು. ಆರ್ಥಿಕ ಸಂಕಷ್ಟ, ಚಿತ್ರಮಂದಿರಕ್ಕೆ ಬಾರದ ಪ್ರೇಕ್ಷಕರು ಇವೆಲ್ಲ ಕಾರಣದಿಂದಾಗಿ ಮೈಸೂರಿನಲ್ಲಿ ಈಗಾಗಲೇ ಮೂರ್ನಾಲ್ಕು ಚಿತ್ರಮಂದಿರಗಳು ಇತಿಹಾಸದ ಪುಟ ಸೇರಿದದ್ದವು ಇದೀಗ ಅವುಗಳ ಸಾಲಿಗೆ ಒಲಂಪಿಯಾ ಚಿತ್ರಮಂದಿರ ಕೂಡ ಸೇರಲಿದೆ.
ಮೈಸೂರಿನ ಗಾಂಧಿ ವೃತ್ತದ ಬಳಿ ಇರುವ ಈ ಒಲಂಪಿಯಾ ಚಿತ್ರಮಂದಿರ ಇನ್ನು ಮುಂದೆ ಇತಿಹಾದ ಪುಟಗಳಲ್ಲಷ್ಟೇ ಮೆಲುಕು ಹಾಕಲು ಸಾಧ್ಯವಾಗಲಿದ್ದು ಪ್ರೇಕ್ಷಕರ ಕೊರತೆ ಹಿನ್ನೆಲೆಯಲ್ಲಿ ಚಿತ್ರಮಂದಿರವನ್ನು ಮುಚ್ಚಲು ತೀರ್ಮಾನವನ್ನು ಮಾಡಲಾಗಿದೆ. ಪ್ರೇಕ್ಷಕರು ಚಿತ್ರಗಳನ್ನು ವೀಕ್ಷಿಸಲು ಚಿತ್ರಮಂದಿರಕ್ಕೇ ಬರುತ್ತಿಲ್ಲ. ಇದರಿಂದ ಚಿತ್ರಮಂದಿರ ನಡೆಸುವುದು ಭಾರೀ ಕಷ್ಟವಾಗಲಿದೆ. ಇದರಿಂದ ಮುಚ್ಚಲು ಮಾಲೀಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. 1949ರಲ್ಲಿ ಚಿತ್ರಮಂದಿರ ನಿರ್ಮಾಣವಾಗಿತ್ತು. ಚಿತ್ರಮಂದಿರವಿನ್ನು ಕೇವಲ ನೆನಪಾಗಿಯಷ್ಟೇ ಉಳಿಯಲಿದೆ.
ಮೈಸೂರಿನಲ್ಲಿ ಹೊಸ ಚಿತ್ರಗಳು ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರಮಂದಿರ ಯಶಶಸ್ವೀ ಪ್ರದರ್ಶನವನ್ನು ಕಾಣುತ್ತಿತ್ತು. ಯಶಸ್ವೀ ಚಿತ್ರಮಂದಿರ ಎಂದು ಗುರುತಿಸಿಕೊಂಡಿತ್ತು.
ಮೈಸೂರಿನಲ್ಲಿ ಒಟ್ಟು 26ಚಿತ್ರಮಂದಿರಗಳಿತ್ತು. ಇದೀಗ ಕೇವಲ ಹತ್ತು ಚಿತ್ರಮಂದಿರಗಳು ಮಾತ್ರ ಉಳಿದಿವೆ. ಕೆಲ ತಿಂಗಳ ಹಿಂದಷ್ಟೇ ಲಕ್ಷ್ಮಿ, ಸರಸ್ವತಿ, ಶಾಂತಲಾ ಚಿತ್ರಮಂದಿರಗಳು ಕೂಡ ತಮ್ಮ ಪ್ರದರ್ಶನ ನಿಲ್ಲಿಸಿ ಬಂದ್ ಆಗಿದ್ದವು. ಇದೀಗ ಒಲಂಪಿಯಾ ಚಿತ್ರಮಂದಿರ ಕೂಡ ಅದರ ಹಾದಿಯನ್ನೇ ಹಿಡಿದಿರುವುದು ವಿಷಾದನೀಯ. ಇದು ಸಿನಿಪ್ರಿಯರಿಗೆ ಕೂಡ ಬೇಸರದ ವಿಚಾರವೇ ಸರಿ. ಸಿಂಗಲ್ ಸ್ಕ್ರೀನ್ ಗೆ ಪ್ರೇಕ್ಷಕರ ಕೊರತೆಯ ಕಾರಣ ಹಾಗೂ ಮಾಲ್ ಗಳಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರಗಳು ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಇಂದು ನಷ್ಟದ ಹಾದಿ ಹಿಡಿದಿವೆ. ಇದೇ ಕಾರಣಕ್ಕೆ ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಲು ಮುಂದಾಗುತ್ತಿವೆ ಎಂಬ ಮಾತುಗಳು ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)