ಮೈಸೂರು

ಸತ್ಯ ವಸ್ತುವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಬದುಕು : ಮಲ್ಲಯ್ಯ ಸ್ವಾಮೀಜಿ

ಮೈಸೂರು,ಮೇ.20:- ಜೀವನ ಅನಿರ್ವಚನೀಯವಾದದ್ದು, ಮನುಷ್ಯ ಆತ್ಮ ಜ್ಞಾನಿಯಾದರೆ ನವನೀತದಂತೆ ತೇಲುತ್ತಾನೆಯೇ ಹೊರತು ಮುಳುಗುವುದಿಲ್ಲ. ಸತ್ಯ ವಸ್ತುವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಬದುಕು ಎಂದು ಬೆಳಗಾವಿ ಜಿಲ್ಲೆ ಘೋಡಗೇರಿಯ ಶ್ರೀ ಶಿವಾನಂದ ಮಠದ  ಮಲ್ಲಯ್ಯಸ್ವಾಮೀಜಿ ತಿಳಿಸಿದರು.

ಊಟಿಯ ತೀಟಕಲ್ ನ ಜೆಎಸ್ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ  ಮೇ18 ರಿಂದ 23 ರವರೆಗೆ ಸಾರ್ವಜನಿಕರಿಗಾಗಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ‘ಆಧ್ಯಾತ್ಮಿಕ ಚಿಂತನೆ’ ಎಂಬ ವಿಷಯದ ಕುರಿತು ಮಾತನಾಡಿದರು.

ಮಾನವನಿಗೆ ಅತೀ ಮುಖ್ಯವಾದುದು ಆಧ್ಯಾತ್ಮದ ಚಿಂತನೆ. ಮೂಲಭೂತ ವಸ್ತುವಾದ ಆತ್ಮ ನಾಶವಿಲ್ಲದ್ದು. ಚಿತೆ – ಚಿಂತೆ – ಚಿಂತನೆ ಈ ಮೂರು. ವಿಷಯಗಳು ನಾಶಮಾಡುವ ಕ್ರಿಯೆಯನ್ನು ಒಳಗೊಂಡಿರುತ್ತದೆ. ಚಿತೆ ಯಾವುದು ಬೇಡ ಅದನ್ನು ಸುಟ್ಟು ನಾಶ ಮಾಡುತ್ತದೆ. ಶರೀರವನ್ನು ಸುಡುವ ಶಕ್ತಿ ಅದಕ್ಕಿದೆ. ಚಿಂತೆ ವಿಷಯಾಸಕ್ತಿಗಳ ಮೂಲಕ ಬದುಕುವವರ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತದೆ, ಮನುಷ್ಯನನ್ನು ಸುಡುತ್ತದೆ, ಕುಟುಂಬವನ್ನು, ಸಮಾಜವನ್ನೂ ನಾಶಮಾಡುತ್ತದೆ. ಚಿಂತನೆ ನಮ್ಮೊಳಗಿನ ಅಜ್ಞಾನವನ್ನು ನಾಶಮಾಡುತ್ತದೆ. ವಿವೇಚನೆಯುಕ್ತವಾದ, ಆಧ್ಯಾತ್ಮಿಕವಾದ ಬದುಕೇ ಚಿಂತನೆ. ಜನನ, ಜೀವನ, ಮರಣಕ್ಕೆ ಕಾರಣಕರ್ತ ಯಾರು ಎಂದು ಆಲೋಚಿಸುವುದೇ ಚಿಂತನೆಯಾಗಿದೆ, ಹಾಗಾಗಿ ಇಂತಹ ಶಿಬಿರಗಳು ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತದೆ. ಯೋಗ, ಧ್ಯಾನ, ಚಿಂತನ ಗೋಷ್ಠಿ, ಸತ್ಸಂಗಗಳಿಂದ ನಮ್ಮ ಬದುಕನ್ನು ಪವಿತ್ರಗೊಳಿಸಿಕೊಳ್ಳಬಹುದು. ನಮಗೆ ಬಸವಣ್ಣನ ಶಕ್ತಿ, ಅಲ್ಲಮನ ಶೂನ್ಯ ಭಾವ ಆವರಿಸಿಕೊಳ್ಳುವಂತೆ ಬದುಕುವುದೇ ಶ್ರೇಷ್ಠ ಜೀವನವೆಂದು ತಿಳಿಸಿದರು.
ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸ್ಥಿರವಾಗಿರಬೇಕೆಂದರೆ ಶಾಖಾಹಾರವೇ ಉತ್ತಮ ಎಂದು ವಿಜಯಪುರ ಶಾಖಾಹಾರಿ ಸಂಘದ ಅಧ್ಯಕ್ಷರಾದ   ಪ್ರಕಾಶ್ ಸಿಂಗ್ ಹಜೇರಿ ಅವರು ‘ನಿಯಮಿತ ಆಹಾರ’ಎಂಬ ವಿಷಯ ಕುರಿತು ಎರಡನೇ ಉಪನ್ಯಾಸದಲ್ಲಿ ತಿಳಿಸಿದರು.
ಹಿರಿಯ ನಾಗರಿಕರು ಇಂದು ಹೆಚ್ಚು ಸೈಬರ್ ಕ್ರೈಮ್ ಗೆ ಒಳಗಾಗುತ್ತಿದ್ದಾರೆ ಇದರ ಬಗ್ಗೆ ಹೆಚ್ಚು ಜಾಗೃತ ವಹಿಸಬೇಕಾಗಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಡಾ. ಡಿ.ವಿ.ಗುರುಪ್ರಸಾದ್ ಅವರು ತಿಳಿಸಿದರು. ಮೂರನೇ ಉಪನ್ಯಾಸದಲ್ಲಿ ಅವರು ‘ಸೈಬರ್- ಜಾಗೃತಿ’ ಎಂಬ ವಿಷಯ ಕುರಿತು ಮಾತನಾಡಿ ಮುಂದುವರಿದ ಇಂದಿನ ತಾಂತ್ರಿಕ ಯುಗದಲ್ಲಿ ಮೋಸ ವಂಚನೆಗೆ ಒಳಗಾಗುವ ಜನರು ಹೆಚ್ಚಾಗಿದ್ದಾರೆ. ಇಂತಹ ವಂಚನೆಗೆ ಪೊಲೀಸ್ ಅಧಿಕಾರಿಗಳೂ ಸಹ ಒಳಗಾಗಿರುವುದು ಸೋಜಿಗ. ಆದರೆ ಮೋಸ ಮಾಡುವವರಿಗೆ ಪೊಲೀಸರಾದರೇನು ಜನ ಸಾಮಾನ್ಯರಾದರೇನು ವಂಚಕರಿಗೆ ವಂಚನೆ ಹೊರತುಪಡಿಸಿ ಬೇರಾವುದೇ ಆಲೋಚನೆಗಳಿಲ್ಲ. ಹಾಗಾಗಿ ಇಂತಹ ಅಕ್ರಮಗಳಿಂದ ಮುಕ್ತರಾಗಬೇಕೆಂದರೆ ಅರಿವು ಮುಖ್ಯವಾಗಿದೆ. ಸಾಮಾಜಿಕ ಜಾಲತಾಣಗಳನ್ನು ಜಾಗೃತವಾಗಿ ಬಳಸಬೇಕು. ಬ್ಯಾಂಕುಗಳ ಹೆಸರಿನಲ್ಲಿ ಅಪರಿಚಿತರಿಂದ ಬರುವ ಕರೆಗಳನ್ನು ಸ್ವೀಕರಿಸುವುದರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಓಟಿಪಿ ಸಂಖ್ಯೆಯನ್ನು ಕೇಳುವ ಕರೆಗಳು ಹಾಗೂ ನಿಮ್ಮ ಮೊಬೈಲ್ ನಂಬರ್ ಗೆ ಬಹುಮಾನ ಬಂದಿದೆ ಎಂದು ನಮ್ಮಲ್ಲಿ ಆಸೆ ಹುಟ್ಟಿಸಿ ವಂಚನೆ ಮಾಡುವ ಜಾಲವೇ ಇದೆ. ಇದು ಎಲ್ಲಿಂದ ಆಗುತ್ತಿದೆ, ಯಾರು ಮಾಡುತ್ತಾರೆ ಎಂದು ತಿಳಿಯುವುದು ಕಷ್ಟವಾಗಿದೆ. ಸೈಬರ್ ಕ್ರೈಮ್ ಅನ್ನುವುದು ಜಗದಗಲ ವಿಸ್ತರಿಸಿದೆ.ದೊಡ್ಡ ದೊಡ್ಡ ಬ್ಯಾಂಕ್ ಗಳು ಕೂಡ ವಂಚನೆಗೆ ಒಳಗಾಗಿವೆ ಎಂದು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಶಿಬಿರಾರ್ಥಿಗಳಲ್ಲಿ ಸೈಬರ್ ಕ್ರೈಮ್ ಜಾಗೃತಿ ಮೂಡಿಸಿದರು.

ಶಿಬಿರದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ- ಧ್ಯಾನ ಹಾಗೂ ಸಂಜೆ ದೇಸಿ ಆಟಗಳ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಪ್ರಾರ್ಥನೆ ನಂತರ ಸುತ್ತೂರು ಶ್ರೀ ಮಠದ ಗುರುಪರಂಪರೆಯ ಕುರಿತ ಅನಿಮೇಷನ್‌ ಚಿತ್ರವನ್ನು ಪ್ರದರ್ಶಿಸಲಾಯಿತು.
ಶಿಬಿರದಲ್ಲಿ ಮೈಸೂರು, ಚಾಮರಾಜನಗರ, ಬೆಂಗಳೂರು, ತುಮಕೂರು, ಶಿವಮೊಗ್ಗ,ರಾಯಚೂರು, ಬಾಗಲಕೋಟೆ, ಗದಗ, ಬೆಳಗಾವಿ, ಗುಲ್ಬರ್ಗ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಿಂದ 129 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: