
ಮೈಸೂರು,ಮೇ.20:- ಚಾಮುಂಡಿಪುರಂ ಬಡಾವಣೆಯಲ್ಲಿ ಆಡಿ ಬೆಳೆದ ನಟ ವಸಿಷ್ಠ ಸಿಂಹ ಅವರು ಇಂದು ಚಾಮುಂಡಿಪುರಂನ ಭಾಗವಾದ ಅಂದಾನಿ ವೃತ್ತದಲ್ಲಿರುವ ಹಳೆ ಶಾಲೆಯಾದ ವಾಣಿ ವಿದ್ಯಾಮಂದಿರ ಶಾಲೆಯಲ್ಲಿ 2022-23ರ ಶೈಕ್ಷಣಿಕ ವರ್ಷಾರಂಭದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ ವಿತರಿಸಿ ಹೂ ನೀಡಿ ಶುಭಕೋರಿದರು.
ಬಳಿಕ ಮಾತನಾಡಿದ ಅವರು ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು, ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದರೂ ಶಿಕ್ಷಣವಂತರಾಗಿದ್ದರೇ ಮಾತ್ರ ಉನ್ನತ ಸ್ಥಾನಕ್ಕೇರಿ ಸಾಧನೆ ಮಾಡಲು ಸಾಧ್ಯ, ಹಾಗಾಗಿ ಎಷ್ಟೆ ತೊಂದರೆಯಿದ್ದರೂ ಶಿಕ್ಷಣವನ್ನು ಮಕ್ಕಳು ಮೊಟಕುಗೊಳಿಸದೇ ವ್ಯಾಸಂಗ ಮಾಡಲು ಮುಂದಾಗಬೇಕು. ಎರಡು ವರ್ಷಗಳ ಕಾಲ ಕೋವಿಡ್ ಇದ್ದ ಕಾರಣ ಆನ್ಲೈನ್ ತರಗತಿಗಳು ನಡೆದು ಮಕ್ಕಳು ಶಾಲೆಗೆ ಬರಲಾಗಿರಲಿಲ್ಲ. ಶಾಲಾ ಶೈಕ್ಷಣಿಕ ವರ್ಷವನ್ನು 15ದಿನಗಳ ಮುಂಚಿತವಾಗಿ ಪ್ರಾರಂಭಿಸಿರುವ ಶಿಕ್ಷಣ ಇಲಾಖೆ ನಡೆ ಸ್ವಾಗತಾರ್ಹ. ನಾನೂ ಕೂಡ ಚಾಮುಂಡಿಪುರಂ ವಿದ್ಯಾರಣ್ಯಪುರಂ ಬಡಾವಣೆಯಲ್ಲಿ ಆಡಿ ಬೆಳೆದವನು. ಕಷ್ಟದ ದಿನಗಳು ಎಷ್ಟೇ ಎದುರಾದರೂ ಸಹ ವ್ಯಾಸಂಗ ಮಾಡುವುದನ್ನು ನಿಲ್ಲಿಸಲಿಲ್ಲ. ಬಾಲ್ಯದ ದಿನಗಳಲ್ಲಿ ಇತಿಹಾಸದ ಪುಸ್ತಕಗಳನ್ನು ಓದಿ ಮಾಹಿತಿ ತಿಳಿದುಕೊಳ್ಳುವಲ್ಲಿ ಹೆಚ್ಚು ಆಸಕ್ತಿ, ಉತ್ಸಾಹ ನನ್ನಲ್ಲಿತ್ತು. ಪುಸ್ತಕವೇ ನನ್ನ ಅತ್ಯುತ್ತಮ ಸ್ನೇಹಿತ. ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಮತ್ತು ಅಶಕ್ತ ಮಕ್ಕಳಿಗೆ ನೋಟ್ ಪುಸ್ತಕ, ಕಲಿಕಾ ಪಠ್ಯ ಸಾಮಾಗ್ರಿಗಳನ್ನು ನೀಡುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕರಾದ ಪರಶುರಾಮ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ , ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಉದ್ಯಮಿ ಜಯರಾಮ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ , ಯುವ ಮುಖಂಡರಾದ ಅಜಯ್ ಶಾಸ್ತ್ರಿ , ಕಾರ್ತಿಕ್, ಮುರಳಿಧರ್, ಎಸ್ ಎನ್ ರಾಜೇಶ್ , ನವೀನ್ ಕೆಂಪಿ , ಲಿಂಗರಾಜು ಇತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)