
ಮೈಸೂರು
ರಸ್ತೆಯಲ್ಲಿನ ಹೊಂಡ-ಗುಂಡಿ ಮುಚ್ಚುವಲ್ಲಿ ನಿರತರಾದ ಟ್ರಾಫಿಕ್ ಪೊಲೀಸ್!
ಮೈಸೂರು,ಮೇ.20:- ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ಹೊಂಡ-ಗುಂಡಿ ಮುಚ್ಚುವ ಕಾರ್ಯ ಸರಿಯಾಗಿ ನಡೆದಿಲ್ಲ. ಇದರಿಂದ ದ್ವಿಚಕ್ರವಾಹನ ಸವಾರರು ಬಿದ್ದು ಏಟು ಮಾಡಿಕೊಳ್ಳುವುದು, ಅಪಘಾತವಾಗುವುದು ನಡೆದೇ ಇದೆ. ಪಾಲಿಕೆ ಇನ್ನೂ ಗುಂಡಿಗಳನ್ನು ಮುಚ್ಚದೇ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ ಟ್ರಾಫಿಕ್ ಪೊಲೀಸರು ಹೊಂಡಗುಂಡಿಯನ್ನು ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂತು. ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಹೊಂಡ ಗುಂಡಿಗಳನ್ನು ಖುದ್ದು ಸಾರ್ವಜನಿಕರು, ರಿಕ್ಷಾ ಚಾಲಕರು ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರ ಜೊತೆ ಸಂಚಾರ ಪೊಲೀಸರು ಕೂಡ ಮಣ್ಣು-ಇಟ್ಟಿಗೆಗಳನ್ನು ತಂದು ಹೊಂಡ ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂತು.
ಒಂದು ಕಡೆ ಟ್ರಾಫಿಕ್ ಪೊಲೀಸ್ ರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾದರೆ, ಇನ್ನೊಂದು ಕಡೆ ಪಾಲಿಕೆಯನ್ನು ಅಣಕಿಸಿದಂತಿದೆ.
ಒಟ್ಟಿನಲ್ಲಿ ಪಾಲಿಕೆ ಹೊಂಡಗುಂಡಿಗಳನ್ನು ಮುಚ್ಚುವತ್ತ ಗಮನ ಹರಿಸಿಲ್ಲ. ಕಾಮಗಾರಿಯ ನೆಪದಲ್ಲಿ ಕೆಲವು ಕಡೆ ರಸ್ತೆಗಳನ್ನು ಅಗೆದು ಸರಿಪಡಿಸದೇ ಹಾಗೇ ಬಿಟ್ಟಿದ್ದು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸಾರ್ವಜನಿಕರು ರಸ್ತೆ ದುರಸ್ಥಿಗೆ ಆಗ್ರಹಿಸಿ ಬೀದಿಗಿಳಿಯುವ ಮುನ್ನ ಪಾಲಿಕೆಯ ಸದಸ್ಯರು, ಅಧಿಕಾರಿಗಳು ದುರಸ್ಥಿ ಕಾರ್ಯಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು, ವಾಹನ ಸವಾರರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)