ಕರ್ನಾಟಕಪ್ರಮುಖ ಸುದ್ದಿ

ಬಾವನ ಮೇಲಿನ ಸೇಡು : ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ : ವ್ಯಕ್ತಿಯ ಬಂಧನ

ರಾಜ್ಯ(ಬೆಂಗಳೂರು),ಮೇ.20 : ಬೆಳ್ಳಂ ಬೆಳ್ಳಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರುದಾಗಿ ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಂದು ಬೆಳಗಿನ ಜಾವ 3.30 ರಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಂಟ್ರೋಲ್ ರೂಮ್‍ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ಹಿನ್ನೆಲೆ ಪೊಲೀಸರು ಪರಿಶೀಲಿಸಿದ್ದು, ಯಾವುದೇ ಬಾಂಬ್ ಸುಳಿವು ಸಿಕ್ಕಿರಲಿಲ್ಲ.

ಕರೆ ಬಂದ ನಂಬರ್ ಪತ್ತೆಗೆ ಮುಂದಾದ ಪೊಲೀಸರಿಗೆ ಆರೋಪಿಯು ವಿಧಾನಸೌಧದ ಶಾಂತಿನಗರದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡಿದ್ದು, ಅವನು ಹೇಳಿದ ಕಾರಣ ಕೇಳಿ ಶಾಕ್ ಆಗಿದ್ದಾರೆ. ಆರೋಪಿಯೂ, ತನ್ನ ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ.

ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಶಿಷ್ ಗುಪ್ತ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ಆರೋಪಿಯಾಗಿದ್ದು, ಅವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುಭಾಶಿಷ್ ಗುಪ್ತ ಈ ಹಿಂದೆ ಏರ್‌ಪೋರ್ಟ್  ನಲ್ಲಿ ಕೆಲಸ ಮಾಡುತ್ತಿದ್ದ.

ಸುಭಾಶಿಷ್‍ ನ ಅಕ್ಕ ಮತ್ತು ಬಾವನ ನಡುವೆ 10 ವರ್ಷಗಳ ಹಿಂದೆ ಜಗಳವಾಗಿತ್ತು. ಇಬ್ಬರಿಗೂ ವಿಚ್ಛೇದನ ಸಹ ಆಗಿತ್ತು. ಇದಕ್ಕೆ ಸುಭಾಶಿಷ್ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಈ ಹಿನ್ನೆಲೆ ಶುಕ್ರವಾರ ಮುಂಜಾನೆ 3:30ಕ್ಕೆ ಆರೋಪಿ ತನ್ನ ಬಾವನ ಹೆಸರು ಹೇಳಿ ಕಂಟ್ರೋಲ್ ರೂಮ್‍ಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ.

ಸುಭಾಶಿಷ್ ವಿಚ್ಛೇದನ ನೀಡಿದ್ದ ಭಾವನನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ ಎಂದುಕೊಂಡಿದ್ದ. ಆದರೆ ಪೊಲೀಸರು ಆರೋಪಿಯ ಜಾಲವನ್ನು ಹಿಡಿದು ಸುಭಾಶಿಷ್‍ನನ್ನು ಬಂಧಿಸಿದ್ದಾರೆ

ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಶಾನ್ಯ ವಿಭಾಗ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಯುತ್ತಿದೆ. ಬಳಿಕ ವಿಧಾನಸೌಧ ಪೊಲೀಸರ ವಶಕ್ಕೆ ಆರೋಪಿಯನ್ನು ಹಸ್ತಾಂತರಿಸಲಾಗಿದೆ.(ಎಸ್.ಎಂ)

Leave a Reply

comments

Related Articles

error: