
ಕರ್ನಾಟಕದೇಶಪ್ರಮುಖ ಸುದ್ದಿ
ರಾಜ್ಯದ ಮೂರು ಜಿಲ್ಲೆಗಳ ಅದಿರು ರಫ್ತಿಗೆ ಸುಪ್ರೀಂಕೋರ್ಟ್ ಅನುಮತಿ
ದೇಶ(ನವದೆಹಲಿ),ಮೇ.20 : ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದ ಕಬ್ಬಿಣದ ಅದಿರು ಮಾರಾಟ ಮತ್ತು ರಫ್ತಿಗೆ ಹೇರಲಾಗಿದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ಹಿಂಪಡೆದಿದ್ದು, ಭಾರತ ಸರ್ಕಾರದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಅದಿರು ರಫ್ತು ಮಾಡಲು ಅನುಮತಿ ನೀಡಲಾಗಿದೆ.
2011ರಲ್ಲಿ ಕರ್ನಾಟಕದಿಂದ ಕಬ್ಬಿಣದ ಅದಿರು ಮಾರಾಟ ಮತ್ತು ರಫ್ತಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವು ಮಾಡುವಂತೆ ಗಣಿ ನಿರ್ವಾಹಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎನ್.ವಿ ರಮಣ ನೇತೃತ್ವದ ದ್ವಿ ಸದಸ್ಯ ಪೀಠ ಈ ಮಹತ್ವದ ಆದೇಶ ನೀಡಲಾಗಿದೆ.
ಕರ್ನಾಟಕದ ಗಣಿಗಳು ದೇಶದ ಇತರೆ ಗಣಿಗಳ ಜೊತೆಗೆ ಸಮತಟ್ಟಾದ ಮೈದಾನದಲ್ಲಿರುವುದು ಅಗತ್ಯ ಎನ್ನುವ ಭಾರತದ ಒಕ್ಕೂಟದ ನಿಲುವಿಗೆ ನಾವು ಸಹಮತ ಹೊಂದಿದ್ದೇವೆ. ಮೂರು ಜಿಲ್ಲೆಯ ಅದಿರಿಗಾಗಿ ತಂದಿರುವ ನಿಯಮಗಳನ್ನು ಪರಿಶೀಲಿಸುವ ಸಮಯ ಬಂದಿದೆ. 2011 ರಿಂದ ಇ-ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದು ಪರಿಸ್ಥಿತಿಯನ್ನು ಉತ್ತಮವಾಗಿಸಿದೆ.
ಪರಿಸರ ಪರಿಸ್ಥಿತಿ ಸುಧಾರಿಸಿದ್ದು ನಿಯಮ ಸಡಿಲಿಸುವ ಸಮಯ ಬಂದಿದೆ. ಹೀಗಾಗಿ ಅದಿರು ಮಾರಾಟ ಮತ್ತು ರಫ್ತು ಮೇಲಿನ ನಿರ್ಬಂಧಗಳನ್ನು ನಾವು ಸಡಿಲಗೊಳಿಸುತ್ತಿದ್ದೇವೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈಗಾಗಲೇ ಅಗೆದಿರುವ ಕಬ್ಬಿಣದ ಅದಿರನ್ನು ಇ-ಹರಾಜು ಮಾಡದೇ ನೇರ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಲು ಗಣಿ ನಿರ್ವಾಹಕರಿಗೆ ಕೋರ್ಟ್ ಅನುಮತಿ ನೀಡಿದೆ. ಈಗ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದ್ದು, ಮುಂದೆ ಭಾರತ ಸರ್ಕಾರದ ನೀತಿಗಳ ಪ್ರಕಾರ ರಫ್ತು ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ.(ಎಸ್.ಎಂ)