ಕರ್ನಾಟಕಪ್ರಮುಖ ಸುದ್ದಿ

ಭೂ ಕಬಳಿಕೆ ಆರೋಪ : ಶ್ರೀರಾಮುಲುರನ್ನು ಕ್ಯಾಬಿನೆಟ್‍ನಿಂದ ಕೈಬಿಡಬೇಕು ; ಮಾಜಿ ಶಾಸಕ ತಿಪ್ಪೇಸ್ವಾಮಿ ಆಗ್ರಹ

ರಾಜ್ಯ(ಚಿತ್ರದುರ್ಗ),ಮೇ.21 : ಭೂ ಕಬಳಿಕೆ ಆರೋಪ ಹೊತ್ತಿರೋ ಭ್ರಷ್ಟಮಂತ್ರಿ ಶ್ರೀರಾಮುಲು ಅವರನ್ನು ಕ್ಯಾಬಿನೆಟ್‍ನಿಂದ ಕೈಬಿಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.

ಸಚಿವ ಶ್ರೀರಾಮುಲು ಅಕ್ರಮ ಕುರಿತು ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀರಾಮುಲು ಬಳ್ಳಾರಿಯ ಶಾಸಕರಾಗಿದ್ದ ಅವಧಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷ್ಮಮ್ಮ ಮಹಿಳೆಗೆ ವಂಚಿಸಿದ್ದಾರೆ. ಲಕ್ಷ್ಮಮ್ಮ ಅವರ 27 ಎಕರೆ 25 ಗುಂಟೆ ಜಮೀನಿನಲ್ಲಿ 10 ಎಕರೆ ಜಮೀನು ನೀರಾವರಿ ಯೋಜನೆಯ ಕೆನಾಲ್ ವಶಪಡಿಸಿಕೊಳ್ಳಲಾಗಿದೆ. ಉಳಿದ 17 ಎಕರೆ 25 ಗುಂಟೆ ಜಮೀನನ್ನು ಶ್ರೀರಾಮುಲು ಬಳ್ಳಾರಿ ಶಾಸಕರಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗದಿಂದ ಡಿಸಿ, ಎಸಿ, ಸಬ್‍ರಿಜಿಸ್ಟ್ರಾರ್ ಹಾಗೂ ತಹಶೀಲ್ದಾರ್ ಒಳಗೊಂಡಂತೆ ಎಲ್ಲರೂ ಶಾಮೀಲಾಗಿ ಅಮಾಯಕ ಮಹಿಳೆಗೆ ವಂಚಿಸಿದ್ದಾರೆ. ಮಹಿಳೆಗೆ ತಿಳಿಯದಂತೆ ಕೃಷ್ಣಮೂರ್ತಿ ಎನ್ನುವವರಿಂದ ಕ್ರಯ ಮಾಡಿಸಿಕೊಂಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಸಂಪುಟದಲ್ಲಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ಅವರ ತಲೆದಂಡವಾಗಿದೆ. ಆದರೆ ಶ್ರೀರಾಮುಲು ವಿಚಾರದಲ್ಲಿ ಸಿಎಂ ಮೀನಾಮೇಷ ಎಣಿಸುವುದು ಸರಿಯಲ್ಲ. ಈಶ್ವರಪ್ಪ ಅವರಿಗೆ ಒಂದು ನ್ಯಾಯ, ಶ್ರೀರಾಮುಲು ಅವರಿಗೆ ಒಂದು ನ್ಯಾಯನಾ! ಈಗಾಗಲೇ ಭೂ ಕಬಳಿಕೆ ಆರೋಪದಡಿ ಶ್ರೀರಾಮುಲು ವಿರುದ್ಧ ಬಳ್ಳಾರಿಯಲ್ಲಿ ಚಾರ್‍ಶೀಟ್ ಆಗಿದೆ ಎಂದು ಕಿಡಿಕಾರಿದ್ದಾರೆ.

ಭ್ರಷ್ಟಾಚಾರದ ಅಲೆಯಲ್ಲಿ ಸಚಿವ ಶ್ರೀರಾಮುಲು ತೇಲುತ್ತಿದ್ದಾರೆ. ಆದರೂ ಸಚಿವ ಸ್ಥಾನದಿಂದ ತೆಗೆಯಲು ತಾರತಮ್ಯ ಮಾಡಲಾಗ್ತಿದೆ. ಈ ಪ್ರಕರಣದಲ್ಲಿ ಆರನೇ ಆರೋಪಿಯಾಗಿ ಜಾಮೀನು ಪಡೆದಿರೋ ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಕೇಸು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, ಇನ್ಯಾವ ತಿರುವು ಪಡೆಯಲಿದೆ ನೋಡಬೇಕು. ಇಂತಹ ಭ್ರಷ್ಟ ಶ್ರೀರಾಮುಲು ಸಚಿವರಾಗಿದ್ರೆ, ಅನೇಕ ಜನ ಅಮಾಯಕರಿಗೆ ಅನ್ಯಾಯವಾಗಲಿದೆ. ಹೀಗಾಗಿ ಇಂತಹ ಭ್ರಷ್ಟಮಂತ್ರಿಯನ್ನು ಸಂಪುಟದಿಂದ ಕೈಬಿಡುವಂತೆ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಎಸ್.ಟಿ ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶ್ರೀರಾಮುಲು ವಂಚಿಸಿದ್ದಾರೆ. ಸೆಷನ್‍ನಲ್ಲಿ ಮೀಸಲಾತಿ ಬಗ್ಗೆ ಶಾಸಕರು ಕೇಳಬೇಕಿತ್ತು. ವಾಲ್ಮೀಕಿ ಶ್ರೀಗಳನ್ನು ಪ್ರತಿಭಟಿಸಲು ಮುಂದೆ ಬಿಟ್ಟು ಸುಮ್ಮನಾಗಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಅಗೌರವ ತೋರಿದ್ದಾರೆ. ಶ್ರೀರಾಮುಲುಗೆ ವಾಲ್ಮೀಕಿ ಸಮುದಾಯ ಪಾಠ ಕಲಿಸಬೇಕು. ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು. ಶ್ರೀರಾಮುಲು ನಾಯಕ ಸಮುದಾಯದವನೇ ಅಲ್ಲ ಅನ್ನೋದನ್ನ ತಿಳ್ಕೊಬೇಕು ಎಂದು ಸಚಿವ ಶ್ರೀರಾಮುಲು ವಿರುದ್ಧ ಕುಟುಕಿದ್ದಾರೆ.(ಎಸ್.ಎಂ)

Leave a Reply

comments

Related Articles

error: