ಮೈಸೂರು

ಸಂಶೋಧನಾ ಗ್ರಂಥಗಳ ಪ್ರಕಟಣೆಗೆ ವಿವಿಯಿಂದ ಮೊದಲಿನಿಂದಲೂ ಪ್ರೋತ್ಸಾಹ : ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಮೇ.23:- ಸಂಶೋಧನಾ ಗ್ರಂಥಗಳ ಪ್ರಕಟಣೆಗೆ ವಿಶ್ವವಿದ್ಯಾನಿಲಯ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿದೆ.  ನಾನು ಕುಲಪತಿಯಾದ ಮೇಲೂ ಸಂಪೂರ್ಣ ನೆರವು-ಪ್ರೋತ್ಸಾಹ ನೀಡುತ್ತಿದ್ದೇನೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಯಾವುದೇ ವಿಶ್ವವಿದ್ಯಾನಿಲಯಕ್ಕೆ ಕೀರ್ತಿ ಬರುವುದು ಅಲ್ಲಿಯ ಸಂಶೋಧನಾ ಪ್ರಕಟಣೆಗಳಿಂದ. ಈ ನಿಟ್ಟಿನಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಕಟಣೆಗಳು ಮೈಸೂರು ವಿಶ್ವವಿದ್ಯಾನಿಲಯದ ಕೀರ್ತಿಯನ್ನು ಹಲವು ದಶಕಗಳಿಂದಲೂ ಹೆಚ್ಚಿಸಿದೆ. ಅಧ್ಯಯನ ಸಂಸ್ಥೆಯ ವಿಶ್ವಕೋಶ ಯೋಜನೆ, ಎಪಿಗ್ರಾಫಿಯ ಕರ್ನಾಟಕ ಯೋಜನೆ, ಪ್ರಾಚೀನ ಹಸ್ತಪ್ರತಿಗಳ ಪ್ರಕಟಣ ಯೋಜನೆ ಎಲ್ಲ ಯೋಜನೆಗಳಿಗೂ ಸೂಕ್ತ ನೆರವನ್ನು ನೀಡುತ್ತಾ ಬಂದಿದ್ದೇನೆ. ಇದೇ ರೀತಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನಾ ಗ್ರಂಥಗಳನ್ನು ಅಧ್ಯಯನ ಸಂಸ್ಥೆಯಿಂದ ಪ್ರಕಟಿಸಲೆಂದು ಹಾರೈಸುತ್ತೇನೆ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತ ಪ್ರತಿ ವಿಭಾಗದಿಂದ ಪರಿಷ್ಕರಣಗೊಂಡು ಪ್ರಕಟವಾಗಿರುವ ನಾಲ್ಕು ಗ್ರಂಥಗಳನ್ನು ಸಂತೋಷದಿಂದ ಬಿಡುಗಡೆ ಮಾಡಿದ್ದೇವೆ. ಇವುಗಳಲ್ಲಿ ಪ್ರೊ. ಕೆ.ಜಿ. ನಾರಾಯಣ ಪ್ರಸಾದ್ ಅವರು ಸಂಪಾದಿಸಿರುವ ‘ಗಣಿತ ವಿಳಾಸಂ’ ಎಂಬ ಪುಸ್ತಕವು ಪ್ರಾಚೀನ ಕಾಲಘಟ್ಟದ ಗಣಿತ ಶಾಸ್ತ್ರ ಗಂಥವಾಗಿದೆ. ಡಾ. ವೈ.ಸಿ. ಭಾನುಮತಿ ಅವರು ಸಂಪಾದಿಸಿರುವ ವೈದ್ಯ ಸಂಪುಟ ಕೃತಿ ಹಾವಿನ ಕಡಿತ, ಕುಷ್ಠರೋಗ ಹಲವು ರೀತಿಯ ಕೆಮ್ಮುಗಳು, ಜ್ವರಗಳು ಮುಂತಾದ ನೂರಾರು ರೋಗಗಳಿಗೆ ಚಿಕಿತ್ಸಾ ವಿಧಾನವನ್ನು ಕುರಿತು ವಿವರಿಸಿರುವ ಪ್ರಾಚೀನ ಶಾಸ್ತ್ರ ಗ್ರಂಥವಾಗಿದೆ. ಡಾ. ಭಾನುಮತಿಯವರು ಸಂಪಾದಿಸಿರುವ ಚಂದ್ರಸಾಗರವರ್ಣಿಯ ಕೃತಿ ಧರ್ಮ ಪರೀಕ್ಷೆ ವ್ಯಾಖ್ಯಾನ, ವಸುದೇವ ಪಾರಿಜಾತ, ಚಂದನೆ ಯಕ್ಷಗಾನ ಎಂಬ ಮೂರು ಬೇರೆ ಬೇರೆ ಕೃತಿಗಳನ್ನು ಹೊಂದಿವೆ. ಜಿ.ಜಿ. ಮಂಜುನಾಥನ್ ಅವರು ಸಂಪಾದಿಸಿರುವ ವಿರಾಟ ಪರ್ವ ಸಂಪುಟವು ಭೀಮಸೇನ ವಿಲಾಸ, ವಿರಾಟಪರ್ವ ಯಕ್ಷಗಾನ, ವಿರಾಟ ಪರ್ವ ಸಂಗೀತ ನಾಟಕ ಎಂಬ ಮೂರು ಪ್ರತ್ಯೇಕ ಕೃತಿಗಳನ್ನು ಒಳಗೊಂಡಿದೆ ಎಂದರು.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರು ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಅಧ್ಯಯನ ಸಂಸ್ಥೆ ನಿರ್ದೇಶಕರಾದ ಪ್ರೊ.ಎಂ.ಜಿ.ಮಂಜುನಾಥ, ಡಾ.ವೈ.ಸಿ.ಭಾನುಮತಿ, ಪ್ರೊ.ಜಿ.ನಾರಾಯಣ ಪ್ರಸಾದ್, ಜಿ.ಜಿ.ಮಂಜುನಾಥನ್ ಇದ್ದರು.

ವೈದ್ಯ ಸಂಪುಟ, ಚಂದ್ರಸಾಗರವರ್ಣಿಯ ಮೂರು ಕೃತಿಗಳು, ಗಣಿತ ವಿಳಾಸಂ, ವಿರಾಟ ಪರ್ವ ಸಂಪುಟ ಬಿಡುಗಡೆಯಾದ ನಾಲ್ಕು ಕೃತಿಗಳು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: