
ಕರ್ನಾಟಕಪ್ರಮುಖ ಸುದ್ದಿ
ಎಷ್ಟು ಹೇಳಿದರೂ ಓದಲಿಲ್ಲ ಈಗ ಫೇಲ್ ಆಗಿದ್ದೀರಾ ; ಫೇಲ್ ಆದ ಹುಡುಗರಿಗೆ ಶಿಕ್ಷಕರಿಂದ ಫುಲ್ ಕ್ಲಾಸ್ : ವಿಡಿಯೋ ವೈರಲ್
ರಾಜ್ಯ(ಬೆಂಗಳೂರು),ಮೇ.23 : ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ನಗರದ ಶಾಲೆಯೊಂದರಲ್ಲಿ ಫೇಲ್ ಆಗಿರುವ ಹುಡುಗರಿಗೆ ಶಿಕ್ಷಕರು ಫುಲ್ ಕ್ಲಾಸ್ ತೆಗೆದುಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು ನಗರದ ಮಾರ್ಫಿ ಟೌನ್ ಶಾಲೆಯಲ್ಲಿ ಶಿಕ್ಷಕರೆಲ್ಲರೂ ಸೇರಿ ಫೇಲ್ ಆದ ಹುಡುಗರಿಗೆ ಬೈದು ತಿಳಿಹೇಳಿದ್ದಾರೆ. ವೀಡಿಯೋದಲ್ಲಿ ಶಿಕ್ಷಕಿಯೊಬ್ಬರು, ಫೇಲ್ ಆಗಲು ಕಾರಣವೇನು? ಶಿಕ್ಷಕರು ಸರಿಯಾಗಿ ಶಾಲೆಗೆ ಬರುತ್ತಿಲ್ವಾ? ಪಾಠ ಮಾಡುತ್ತಿಲ್ವಾ? ಬೇರೆ ಏನಾದರೂ ತೊಂದರೆ ನೀಡಿದ್ದಾರಾ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಹುಡುಗ ಶಿಕ್ಷಕರು ಶಾಲೆಗೆ ಸರಿಯಾಗಿ ಬರುತ್ತಿದ್ದಾರೆ. ಉತ್ತಮವಾಗಿ ಪಾಠ ಮಾಡುತ್ತಿದ್ದಾರೆ. ಆದರೆ ನನಗೆ ಓದಲು ಆಗಿಲ್ಲ. ಹೀಗಾಗಿ ಬರೆದಿಲ್ಲ ಎಂದು ಪ್ರತಿಕ್ರಿಯಿಸಿದ್ದಾನೆ.
ಈ ವೇಳೆ ಮತ್ತೋರ್ವ ಶಿಕ್ಷಕ ಮಾತನಾಡಿ, ತರಗತಿ ನಡೆಯುತ್ತಿದ್ದರೆ, ಸತ್ತವರ ಮನೆ ಮುಂದೆ ತಮಟೆ ಹೊಡೆಯಲು ಹೋಗುತ್ತಾರೆ. ನಂತರ 15 ದಿನವಾದರೂ ಶಾಲೆಗೆ ಬರುವುದಿಲ್ಲ. ಪೋಷಕರಿಗೆ ಹೇಳಿದರೆ ನಮ್ಮ ಮಕ್ಕಳು ಈಗ ಶೋಕಿ ಮಾಡದೇ ಇನ್ಯಾವಾಗ ಮಾಡುತ್ತಾರೆ ಎಂದು ಅವರ ಪರವಾಗಿಯೇ ಮಾತನಾಡುತ್ತಾರೆ. ಇವರು ಓದುವುದೂ ಇಲ್ಲ, ಬರೆಯುವುದೂ ಇಲ್ಲ. ಜೊತೆಗೆ ಓದುವ ಮಕ್ಕಳನ್ನು ಇವರೊಂದಿಗೆ ಕರೆದುಕೊಂಡು ಹೋಗುತ್ತಾರೆ. ಎಷ್ಟು ಹೇಳಿದರೂ ಓದಲಿಲ್ಲ. ಈಗ ನೀವು ಮಾಡಿದ ತಪ್ಪಿಗೆ ನಮಗೆ ಛೀಮಾರಿ ಹಾಕುತ್ತಾರೆ ಎಂದು ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದಾರೆ.(ಎಸ್.ಎಂ)