ಮೈಸೂರು

ಶಿಕ್ಷಣ ಇಲಾಖೆಯಲ್ಲಿ  ಕೇಸರೀಕರಣ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ : ಆರ್.ಧೃವನಾರಾಯಣ್ ಆರೋಪ

ಮೈಸೂರು,ಮೇ.25:- ಪಠ್ಯ ಪುಸ್ತಕ ವಿಚಾರದಲ್ಲಿ ರಾಜ್ಯದ ಶಿಕ್ಷಣ ಇಲಾಖೆಯಲ್ಲಿ  ಕೇಸರೀಕರಣ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆರೋಪಿಸಿದರು.

ಮೈಸೂರಿನಲ್ಲಿಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಪಠ್ಯಪುಸ್ತಕ ಕುರಿತ ಅಸಮಾಧಾನ ಪ್ರಶ್ನೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಶಿಕ್ಷಣ ಇಲಾಖೆಯಲ್ಲಿ  ಕೇಸರೀಕರಣ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದ್ದು, ಮಕ್ಕಳ ಮನಸ್ಸಲ್ಲಿ ಈ ಭಾವನೆ ಮೂಡುವ ಕೆಲಸ ಮಾಡಬಾರದು. ದೇವನೂರು ಮಹಾದೇವ ಹಿರಿಯ ಸಜ್ಜನ ಸಾಹಿತಿ. ಅಂತಹವರು ಮನಸ್ಸಿನಲ್ಲಿ ತಾನು ಬರೆದ ಕೃತಿ ಸೇರಿಸಬಾರದು ಎಂಬ ಮಾತುಗಳನ್ನು ಆಡಿದ್ದಾರೆ. ಇದನ್ನು ರಾಜ್ಯ ಸರ್ಕಾರ ಕೂಡಲೇ ಅರಿತುಕೊಳ್ಳಬೇಕು. ಕೂಡಲೇ ಸರ್ಕಾರ ಉನ್ನತಮಟ್ಟದ ಚಿಂತನಾಶೀಲ ಸಾಹಿತಿಗಳನ್ನು ಕರೆಸಿ ಅವರ ಜೊತೆ ಮಾತುಕತೆ ನಡೆಸಬೇಕು. ಪಠ್ಯಪುಸ್ತಕಗಳಲ್ಲಿ ಯಾವ ವಿಚಾರವನ್ನು ಪ್ರಕಟಿಸಬೇಕು ಅನ್ನುವ ಕುರಿತು ಕೂಲಂಕುಶವಾಗಿ ಚರ್ಚೆ ಮಾಡಿ ಕ್ರಮವನ್ನು ತೆಗೆದುಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಯಾವತ್ತೂ ಕೂಡ ರಾಜಕಾರಣವನ್ನು ಮಾಡಿಲ್ಲ ಎಂದರು.

ಪಕ್ಷ ಅಧಿಕಾರದಲ್ಲಿ ಇದ್ದಾಗ ಈ ರೀತಿಯ ಗೊಂದಲಗಳು ಯಾವ ಸಮಯದಲ್ಲೂ ನಡೆದಿರಲಿಲ್ಲ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಗೊಂದಲ ಸೃಷ್ಟಿಯಾಗಿದೆ. ಹಿಂದೂತ್ವ ಮನೋಭಾವನೆ ಮೂಡಿಸುವುದು, ಕೇಸರಿಕರಣ ಮಾಡುವುದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿದೆ.ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ ಎಂದು ಕಿಡಿಕಾರಿದರು.

ಏತನ್ಮಧ್ಯೆ  ಶಾಲಾ ಪಠ್ಯದ ಬಗ್ಗೆ ದೇವನೂರು ಮಹದೇವ ಅಪಸ್ವರ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಮಾಧ್ಯಮಗಳು ಪ್ರಶ್ನಿಸಿದಾಗ ದೇವನೂರು ಮಹಾದೇವ ಅವರನ್ನೇ ಕೇಳಿಯಪ್ಪಾ ಎಂದು ಉತ್ತರಿಸಲು ನಿರಾಕರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: