ಕರ್ನಾಟಕಪ್ರಮುಖ ಸುದ್ದಿ

ರಾಯಚೂರಿನಲ್ಲಿ ಒಂದು ಕೋಟಿಯ ಸ್ಫಟಿಕ ಶಿವಲಿಂಗ ಪ್ರತಿಷ್ಠಾಪನೆ

ರಾಜ್ಯ(ರಾಯಚೂರು),ಮೇ.25 : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರದ ಶಿವಾಲಯ ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ದಕ್ಷಿಣ ಭಾರತದಲ್ಲಿಯೇ ವಿನೂತನ ಮಾದರಿಯ ಶಿವಾಲಯವೊಂದು ಗಾಂಧಿ ನಗರದ ಗ್ರಾಮದಲ್ಲಿ ನಿರ್ಮಿಸಲಾಗಿದೆ.

ರಾಜ್ಯದ ಯಾವ ಧಾರ್ಮಿಕ ಸ್ಥಳದಲ್ಲೂ ಇಲ್ಲದ ಸ್ಫಟಿಕ ಶಿವಲಿಂಗ ಈ ಗ್ರಾಮದ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಾಲಯ ನಿರ್ಮಿಸಿದ 10 ವರ್ಷಗಳ ಬಳಿಕ ಗ್ರಾಮಸ್ಥರು 1 ಕೋಟಿ ರೂ. ಖರ್ಚು ಮಾಡಿ ಬೆಲ್ಜಿಯಂನಿಂದ 20 ಲಕ್ಷ ವೆಚ್ಚ ತೆರಿಗೆ ಪಾವತಿ ಮಾಡಿ ಸ್ಫಟಿಕ ಶಿವಲಿಂಗ ತೆಗೆದುಕೊಂಡು ಬಂದು ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ಲಿಂಗದ ದರ್ಶನಕ್ಕಾಗಿ ದೇಶದ ನಾನಾ ಕಡೆಗಳಿಂದ ಭಕ್ತರ ದಂಡು ಗಾಂಧಿನಗರಕ್ಕೆ ಹರಿದು ಬರುತ್ತಿದೆ.

ಬೆಲ್ಜಿಯಂನಿಂದ ತೆಗೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಿರುವ ಸ್ಫಟಿಕ ಶಿವಲಿಂಗ ದರ್ಶನಕ್ಕೆ ದೇಗುಲದ ಆಡಳಿತ ಮಂಡಳಿ ಹತ್ತಾರು ನಿಯಮಗಳನ್ನು ಮಾಡಿದೆ. ಸಾಮಾನ್ಯ ದಿನಗಳಲ್ಲಿ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೂ ಸ್ಫಟಿಕ ಲಿಂಗ ದರ್ಶನ ಭಾಗ್ಯ ಇಲ್ಲ. ಸ್ಫಟಿಕ ಲಿಂಗದ ದರ್ಶನ ಪಡೆಯಬೇಕಾದರೆ ಮಹಾಶಿವರಾತ್ರಿ ಹಾಗೂ ಕಾರ್ತಿಕ ಹುಣ್ಣಿಮೆ ವೇಳೆಯಲ್ಲಿ ಮಾತ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗಾಂಧಿ ನಗರದಲ್ಲಿ ಸ್ಫಟಿಕ ಶಿವಲಿಂಗದ ದರ್ಶನದ ಜೊತೆಗೆ ಶಿವಲೋಕಕ್ಕೆ ಬಂದ ಅನುಭವ ಆಗುವ ರೀತಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ವಿಶ್ವೇಶ್ವರ ಶಿವಪಂಚಾಯತ ದೇಗುಲದ ಬಳಿಯೇ ಒಂದು ಲಕ್ಷ ಶಿವಲಿಂಗಗಳು, ದೇಶದಲ್ಲಿಯೇ ಅಪರೂಪವಾದ ಆತ್ಮಲಿಂಗ, ಅಷ್ಟಬೈರವ ಮೂರ್ತಿಗಳು,ದಕ್ಷಿಣಾಮೂರ್ತಿ, ವೀರಭದ್ರಸ್ವಾಮಿ, ಗಣಪತಿ-ಕಾರ್ತಿಕೇಯ ಸಮೇತ ಅರ್ಧನಾರೀಶ್ವರ ಲಿಂಗ, ಭಗೀರಥ ಪರಶಿವ, ಗಂಗೆ, ಗೌರಿ ಸೇರಿದಂತೆ 58 ದಿವ್ಯ ಶಕ್ತಿ ದೇವರ ಮೂರ್ತಿಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಗಿದೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಸೇರಿದಂತೆ ದೇಶದ ನಾನಾ ರಾಜ್ಯಗಳ ಭಕ್ತರು ಈ ಪುಣ್ಯ ಸ್ಥಳಕ್ಕೆ ಆಗಮಿಸಿ ದರ್ಶನ ಪಡೆದು ಹೋಗುತ್ತಿದ್ದಾರೆ.

ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿಯೇ ಎಲ್ಲಿಯೂ ಇಲ್ಲದ ಸ್ಪಟಿಕ ಲಿಂಗವನ್ನು ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಹೀಗಾಗಿ ಗಾಂಧಿನಗರ ಈಗ ಶಿವಭಕ್ತಾದಿಗಳ ಪಾಲಿಗೆ ಕೈಲಾಸದಂತೆ ಭಾಸವಾಗಿದ್ದು, ಶಿವನ ದರ್ಶನ ಪಡೆದು ಪಾವನರಾಗ್ತಿದ್ದಾರೆ.(ಎಸ್.ಎಂ)

Leave a Reply

comments

Related Articles

error: