
ಕರ್ನಾಟಕಪ್ರಮುಖ ಸುದ್ದಿಮೈಸೂರು
ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ರಾಜ್ಯದ ಅಭಿವೃದ್ಧಿಗೆ ಮಾರಕವಾದ ವಾತಾವರಣ ನಿರ್ಮಾಣವಾಗಬಹುದು : ಹೆಚ್.ಡಿ.ಕುಮಾರಸ್ವಾಮಿ
ಮೈಸೂರು,ಮೇ.25:- ಬಿಜೆಪಿಯಲ್ಲಿರುವ ಆಂತರಿಕ ಭಿನ್ನಾಭಿಪ್ರಾಯ ಗಳಿಂದ ರಾಜ್ಯದ ಅಭಿವೃದ್ಧಿಗೆ ಮಾರಕವಾದಂತಹ ವಾತಾವರಣ ನಿರ್ಮಾಣವಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಇಂದು ಮೈಸೂರಿನಲ್ಲಿ ಮೇಲ್ಮನೆಗೆ ಬಿ.ವೈ.ವಿಜಯೇಂದ್ರಗೆ ಟಿಕೇಟ್ ಕೈತಪ್ಪಿದ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು ರಾಜ್ಯದ ಮುಂದಿನ ಹತ್ತು ತಿಂಗಳ ಸರ್ಕಾರದ ಆಡಳಿತದ ಮೇಲೆ ಯಾವ ರೀತಿಯ ಪರಿಣಾಮವಾಗಲಿದೆ ಎಂಬುದನ್ನು ಕಾದು ನೋಡಬೇಕು. ಅವರಲ್ಲಿರತಕ್ಕ ಆಂತರಿಕ ಭಿನ್ನಾಭಿಪ್ರಾಯ ಗಳಿಂದ ರಾಜ್ಯದ ಅಭಿವೃದ್ಧಿಗೆ ಮಾರಕವಾದಂತಹ ವಾತಾವರಣ ನಿರ್ಮಾಣವಾಗಬಹುದು ಎಂದು ವಿಶ್ಲೇಷಣೆಗಳು ಹೇಳುತ್ತವೆ. ಅದರ ಜೊತೆ ಪಕ್ಷದಲ್ಲಿ ಗುಂಪುಗಾರಿಕೆ, ವಿಶ್ವಾಸದ ಕೊರತೆ ಎಲ್ಲಿಗೆ ಕೊಂಡೊಯ್ಯಲಿದೆ ಕಾದುನೋಡಬೇಕು ಎಂದರು. ಇದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳು ಕಾಣಿಸುತ್ತಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆಯೇ ಇಲ್ಲ. ಆದರೆ ಇದು ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರಬಹುದು, ಆಡಳಿತದ ಮೇಲೂ ಕೆಟ್ಟ ಪರಿಣಾಮ ಬೀರುವ ಲಕ್ಷಣ ಕಾಣಿಸುತ್ತಿದೆ ಎಂದರು.
ಮಂಡ್ಯ ಅಭಿವೃದ್ಧಿ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಕಾವೇರಿ ನದಿ ನೀರಿನ ಬಗ್ಗೆ ಸಿದ್ದರಾಮಯ್ಯನವರು ಏನು ಹೋರಾಟ ಮಾಡಿದ್ದಾರೆ? ಕೆ.ಆರ್. ಪೇಟೆ, ನಾಗಮಂಗಲ,ಪಾಂಡವಪುರ ಈ ಭಾಗಗಳಿಗೆ ನೀರು ತಂದುಕೊಟ್ಟಿದ್ದು ದೇವೇಗೌಡರ ಹೋರಾಟದ ಫಲಶೃತಿ. ಇವರದ್ದೇನಿದೆ ಎಂದು ಪ್ರಶ್ನಿಸಿದರು.
ಮಂಡ್ಯ ಅಭಿವೃದ್ಧಿ ಮಾಡಬೇಕೆನ್ನುವಷ್ಟರಲ್ಲಿ ಸರ್ಕಾರ ತೆಗೆದರಲ್ಲ, ಇನ್ನೂ 6ತಿಂಗಳು ಅಧಿಕಾರ ಇದ್ದಿದ್ದರೆ ಏನು ಅಭಿವೃದ್ಧಿ ಅನ್ನೋದನ್ನು ತೋರಿಸುತ್ತಿದ್ದೆ. ಕಾರ್ಖಾನೆಗೆ 400ಕೋಟಿ ಹಣ ನೀಡುವ ನಿರ್ಧಾರ ಮಾಡಿದ್ವಿ, ಸರ್ಕಾರ ಯಾಕೆ ತೆಗೆದ್ರಿ? ನಾನೆಷ್ಟು ವರ್ಷ ಇದ್ದೆ ಅಧಿಕಾರದಲ್ಲಿ. ಇದ್ದಿದ್ದೆಷ್ಟು ವರ್ಷ ಎಂದು ಪ್ರಶ್ನಿಸಿದರು. ಮೆಡಿಕಲ್ ಕಾಲೇಜ್ 2006-07ರಲ್ಲಿ ಹಣ ಕೊಟ್ಟಿದ್ದು ನಾವು, ನಮ್ಮ ಕಾಲದಲ್ಲಿ ಹಣ ಕೊಟ್ಟಿದ್ದು ಕೆಲಸ ಮಾಡಿದ್ದೇವೆ. ಲೋಕೋಪಯೋಗಿ ಇರಬಹುದು ಅಲ್ಲಿಯೂ ಕೆಲಸ ಮಾಡಿದ್ದೇವೆ. ಹಣ ಕೊಟ್ಟಿದ್ದೇವೆ. ಒಂದೊಂದು ಕ್ಷೇತ್ರಕ್ಕೆ ಎಷ್ಟೆಷ್ಟು ಹಣಕೊಟ್ಟಿದ್ದೇವೆ ಅಂತ ಪಟ್ಟಿ ಕೊಡುತ್ತೇನೆ. ಇವರೇನು ಕೊಟ್ಟಿದ್ದಾರೆ ಮಂಡ್ಯ ಜಿಲ್ಲೆಗೆ ಎಂದು ತಿರುಗೇಟು ನೀಡಿದರು.
ಅವರ ನಡವಳಿಕೆ ಮಾತುಗಳನ್ನು ಕೇಳಿ ನಮ್ಮ ಪಕ್ಷದ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆ ಗೆಲ್ಲಿಸಿಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಮು ಅವರಿಗೆ ನಿಮ್ಮೆದುರೇ ಬಿ ಫಾರಂ ನೀಡುತ್ತಿದ್ದೇನೆ ಎಂದು ಬಿ.ಫಾರಂ ನೀಡಿದರು. ಮೈಸೂರಿನಲ್ಲಿ ನಾನೂ ಸಹ ಎರಡು ಮೂರು ದಿನ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಹಾಸನ, ಮಂಡ್ಯದಲ್ಲಿಯೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಅದಕ್ಕೆ ನಾನೇ ಖುದ್ದು ಬರುತ್ತೇನೆ. ನಾಳೆ ಪಕ್ಷದ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆಯ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಮಂಗಳೂರು-ಮಸೀದಿ ಅಷ್ಟಮಂಗಲ ಪ್ರಶ್ನೆ ಕುರಿತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಡವರ ಸಮಸ್ಯೆ ಕೇಳುವವರಿಲ್ಲ. ದೇಶದ ಅಭಿವೃದ್ಧಿ, ದೇಶದ ಸಾಮರಸ್ಯ ಹಾಳು ಮಾಡುತ್ತಾರೋ ಎಂಬ ಆತಂಕ ಎದುರಾಗಿದೆ. ರಾಜ್ಯದಲ್ಲಿ ಇದೊಂದು ವರ್ಷ ನಡೆಯುತ್ತಿರುತ್ತದೆ. ಹತ್ತು ತಿಂಗಳಾದ ಮೇಲೆ ಎಲ್ಲದಕ್ಕೂ ತೆರೆ ಎಳೆಯುವ ವಾತಾವರಣ ನಿರ್ಮಾಣವಾಗಲಿದೆ ಎಂದರು. (ಕೆ.ಎಸ್,ಎಸ್.ಎಚ್)