ಮೈಸೂರು

ದ.ಪದವೀಧರ ಕ್ಷೇತ್ರದ ಅಭ್ಯರ್ಥಿ ಪ್ರಸನ್ನ ಗೌಡ ಕಾರ್ಯ ಶ್ಲಾಘಿಸಿದ ಸಾಹಿತಿ ದೇವನೂರು ಮಹಾದೇವ

ಮೈಸೂರು,ಮೇ.26:- ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಸನ್ನ ಗೌಡ ಕ್ರಿಯಾಶೀಲ ವ್ಯಕ್ತಿ ಎಂದು ಸಾಹಿತಿ ದೇವನೂರು ಮಹಾದೇವ ಶ್ಲಾಘಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಪ್ರಸನ್ನ ಗೌಡ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದಾರೆಂದು ತಿಳಿದಾಗ ತಕ್ಕನಾದ ಒಬ್ಬ ಅಭ್ಯರ್ಥಿ ಪದವೀಧರ ಕ್ಷೇತ್ರಕ್ಕೆ ಸಿಕ್ಕಿದ ಅಂತ ಅನ್ನಿಸಿತು. ತುಂಬಾ ಹಿಂದಿನಿಂದಲೂ ಪ್ರಸನ್ನ ಅವರನ್ನು ಗಮನಿಸುತ್ತ ಬಂದಿದ್ದೇನೆ. ಅವರಲ್ಲಿ ಎದ್ದು ಕಾಣುವ ಒಂದು ಗುಣ ಎಂದರೆ ಅವರ ರಚನಾತ್ಮಕ ಕ್ರಿಯಾಶೀಲತೆ. ಸಂಘಟನಾ ಸಾಮರ್ಥ್ಯ. ಬನ್ನೂರು ಸುತ್ತಮುತ್ತ ಕೆರೆಗಳನ್ನು ಪುನರುಜ್ಜೀವನಗೊಳಿಸಲು ಮೂರ್ನಾಲ್ಕು ವರ್ಷ ಸತತ ಕೆಲಸ ಮಾಡಿದ್ದಾರೆ. ಜಲತಜ್ಞ ರಾಜೇಂದ್ರ ಪ್ರಸಾದ್ ಹಾಗೂ ಪ್ರಕೃತಿ-ಪರಿಸರ ತಜ್ಞ ಯಲ್ಲಪ್ಪ ರೆಡ್ಡಿಯವರನ್ನು ಮಂಡ್ಯಕ್ಕೆ ಕರೆಯಿಸಿ ಜನಜಾಗೃತಿ ಮಾಡಿದ್ದಾರೆ. ಅಸಂಖ್ಯ ಸಾವಯವ ಕೃಷಿ ಕಾರ್ಯಾಗಾರ ಮಾಡಿದ್ದಾರೆ. ಅಷ್ಟೇ ಅಲ್ಲ ದಿಕ್ಕೆಟ್ಟ ರೈತ ಬೆಳೆಗಾರರನ್ನು ಸಂಘಟನೆ ಮಾಡಿ ಮಂಡ್ಯ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿ ಸಂಘ ಕಟ್ಟಿದ್ದಾರೆ. ಅಷ್ಟೇ ಅಲ್ಲ. ಬೆಳೆಗಾರರ ಉತ್ಪನ್ನಗಳ ಮಾರಾಟಕ್ಕಾಗಿ ‘ಮಂಡ್ಯ ಆರ್ಗಾನಿಕ್’ ಎಂಬ ಜಂಟಿ ಸಾಹಸದ ಮಾರಾಟ ಜಾಲವನ್ನು ಮಧುಚಂದನ್ ರೊಡನೆ ಜೊತೆಗೂಡಿ ನಿರ್ಮಿಸಿದ್ದಾರೆ. ಜೊತೆಯಲ್ಲಿ ಒಂದು ರೈತ ಕುಟುಂಬ ಒಂದು ಎಕರೆಯಲ್ಲಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಪ್ರಯೋಗದಲ್ಲೂ ತೊಡಿಗಿಸಿಕೊಂಡಿದ್ದಾರೆ ಎಂದಿದ್ದಾರೆ.

ಪ್ರಸನ್ನ ಗೌಡ ಯಾವಾಗ ರೈತ ಸಂಘಕ್ಕೆ ಸೇರಿದರೋ ಅಂದೇ ಅವರಿಗೊಂದು ಹೊಸ ಹುಟ್ಟು ಬಂತು. ಅವರಿಗೊಂದು ವಿಸ್ತಾರ ಬಂತು. ಸೈದ್ಧಾಂತಿಕ ರೆಕ್ಕೆ ಬಂದಂತಾಯಿತು. ಸಮಾಜವನ್ನು ಮುನ್ನಡೆಗೆ ನಡೆಸಬೇಕೆನ್ನುವ ರೈತ ಸಂಘದ ಆಕಾಂಕ್ಷೆಗೆ ಜೊತೆಗೂಡಿ ದಲಿತ ಸಂಘರ್ಷ ಸಮಿತಿಯಲ್ಲೂ ಒಂದಾಗಿದ್ದಾರೆ. ಮತ್ತೆಲ್ಲ ರಚನಾತ್ಮಕ ಸಂಘ ಸಂಸ್ಥೆಗಳು ಮತ್ತು ಪ್ರಗತಿಪರ ಸಂಘಟನೆಗಳಲ್ಲೂ ಜೊತೆಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: