
ಮೈಸೂರು
ವಿದ್ಯಾರ್ಥಿಗಳು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು : ಡಾ. ಟಿ.ಕೆ. ಕೆಂಪೇಗೌಡ
ಮೈಸೂರು,ಮೇ.26:- ಜಯಲಕ್ಷ್ಮಿಪುರಂನಲ್ಲಿರುವ ಎಸ್.ಬಿ.ಆರ್.ಆರ್ ಮಹಾಜನ ಕಾಲೇಜಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಿನ್ನೆ ‘ಸಾಹಿತ್ಯ ಮತ್ತು ಜೀವನ ಮೌಲ್ಯ’ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೈಸೂರಿನ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಟಿ. ಕೆ. ಕೆಂಪೇಗೌಡ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ನೈಪುಣ್ಯತೆ ಆಧಾರಿತ ಶಿಕ್ಷಣವನ್ನು ನೀಡುವುದು ಎನ್ ಇಪಿಯ ಉದ್ದೇಶವಾಗಿದ್ದು, ವಿದ್ಯಾರ್ಥಿ ತನ್ನ ಆಸಕ್ತಿಗೆ ಅನುಗುಣವಾಗಿ ತನಗೆ ಬೇಕಾದ ವಿಷಯಗಳನ್ನು ತೆಗೆದುಕೊಂಡು ತನ್ನ ಗುರಿಯನ್ನು ತಲುಪಬಹುದಾಗಿದೆ ಎಂದರು.
ಜನಪದರು, ಪಂಪ, ರನ್ನ, ಪೊನ್ನ, ಬಸವಣ್ಣ, ಹರಿಹರ, ರಾಘವಾಂಕ ಮೊದಲಾದವರ ಸಾಹಿತ್ಯ ಕೊರಳಿನಿಂದ ಬಂದದ್ದಲ್ಲ, ಕರುಳಿನಿಂದ ಬಂದದ್ದು. ಅಂದರೆ ಹೃದಯ ಕೇಂದ್ರಿತವಾದದ್ದು ಎಂದರು. ಮೌಲ್ಯಗಳ ಸಂಘರ್ಷ ಯಾವಾಗಲೂ ಎದುರಾಗುತ್ತಿದ್ದರೂ, ಸಾಹಿತ್ಯದ ಓದಿನ ಮೂಲಕ ನೈತಿಕ ಮೌಲ್ಯಗಳ ಅನುಷ್ಠಾನ, ಜೀವನ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿಯ ಚಿಂತನೆಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಕವಿರಾಜಮಾರ್ಗಕಾರ ಹೇಳುವಂತೆ ಪರಧರ್ಮವನ್ನು ಪರಮತವನ್ನು ಸಹಿಸುವುದೇ ದೇಶದ ನಿಜವಾದ ಸಂಪತ್ತು ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ ಸ್ವಾಗತಿಸಿದರು. ಡಾ. ವಿನೋದಮ್ಮ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕನ್ನಡ ವಿಭಾಗದ ಪ್ರಕಾಶ್ ಹಾಗೂ ಪ್ರಥಮ ವರ್ಷದ ಬಿಬಿಎ, ಬಿಕಾಂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)