ಮೈಸೂರು

ಆಮ್ ಆದ್ಮಿ ಪಾರ್ಟಿಯನ್ನು ಬಲಪಡಿಸಲು ಮೇ.29ರಿಂದ ಗ್ರಾಮಸಂಪರ್ಕ ಅಭಿಯಾನ : ಮಾಲವಿಕ ಗುಬ್ಬಿವಾಣಿ ಮಾಹಿತಿ

ಮೈಸೂರು,ಮೇ.26:- ಗ್ರಾಮೀಣ ಭಾಗದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಬಲಪಡಿಸಲು ಮೇ.29ರಿಂದ ಗ್ರಾಮಸಂಪರ್ಕ ಅಭಿಯಾನವನ್ನು ನಡೆಸಲಾಗುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷೆ ಮಾಲವಿಕ ಗುಬ್ಬಿವಾಣಿ ಹೇಳಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮೈಸೂರಿನ ಚಾಮರಾಜ ಡಬ್ಬಲ್ ರಸ್ತೆಯಲ್ಲಿರುವ ಪಂಡಿತ್ ನಾರಾಯಣಾಚಾರ್ಯ ಕಲ್ಯಾಣ ಮಂದಿರದಲ್ಲಿ ಮೇ.29ರಂದು ಬೆಳಿಗ್ಗೆ 11ಗಂಟೆಗೆ ವಲಯ ಪದಾಧಿಕಾರಿಗಳ ಸಭೆ ಹಾಗೂ ಗ್ರಾಮಸಂಪರ್ಕ ಅಭಿಯಾನದ ಚಾಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮೈಸೂರು ಜಿಲ್ಲೆಯ ಜನಸಾಮಾನ್ಯರು ಆಮ್ ಆದ್ಮಿ ಪಕ್ಷ ಸೇರಲು ಸಹಾಯವಾಣಿ ಸಕ್ರಿಯವಾಗಿದ್ದು 8884431221ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಸಂದೇಶ ಕಳುಹಿಸುವ ಮೂಲಕ ಪಕ್ಷದೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ತಿಳಿಸಿದರು.

ರಾಜ್ಯಾದ್ಯಂತ ಗ್ರಾಮಸಂಪರ್ಕ ಅಭಿಯಾನ ನಡೆಸಲು ಪಕ್ಷ ನಿರ್ಧರಿಸಿದ್ದು ಅದೇ ರೀತಿ ಮೈಸೂರು ಜಿಲ್ಲೆಯಲ್ಲೂ ಪಕ್ಷವು ಹಳ್ಳಿಗಳನ್ನು ತಲುಪಲಿದೆ. ಬೇರುಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಮುಂದಿನ ಚುನಾವಣೆಗಳಿಗೆ ಪಕ್ಷವನ್ನು ಸಿದ್ಧಗೊಳಿಸಲಾಗುತ್ತದೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ನೇತೃತ್ವದ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯು ಆಮ್ ಆದ್ಮಿ ಪಕ್ಷಕ್ಕೆ ಸಂಪೂರಣ ಬೆಂಬಲ ಘೋಷಿಸಿದೆ. ಗ್ರಾಮೀಣ ಭಾಗದಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಎಎಪಿಯನ್ನು ಬೆಂಬಲಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ತಮ್ಮದೇ ಸರ್ಕಾರದ ಆರೋಗ್ಯ ಸಚಿವರು ಒಂದು ಪರ್ಸೆಂಟ್ ಕಮೀಷನ್ ತೆಗೆದುಕೊಳ್ಳುತ್ತಿದ್ದಾರೆಂದು ತಿಳಿದ ಭಗವಂತ್ ಮಾನ್ ರವರು ತಕ್ಷಣವೇ ಅವರನ್ನು ವಜಾ ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳು ಕಳಂಕಿತ ಸಚಿವರ ರಾಜೀನಾಮೆಗೆ ಆಗ್ರಹಿಸುವ ಮುನ್ನವೇ ಮಾನ್ ರವರು ವಜಾಮಾಡಿ ಮಾದರಿಯಾಗಿದ್ದಾರೆ. ಆದರೆ ಬಿಜೆಪಿ ಆಡಳಿತವಿರುವ ಕರ್ನಾಟಕದ ಬಹುತೇಕ ಸಚಿವರ ಮೇಲೆ ಸಾಲುಸಾಲು ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದ್ದರೂ ಹಾಗೂ ಜನರು ರಾಜೀನಾಮೆಗೆ ಆಗ್ರಹಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಂತಹ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಪಾರದರ್ಶಕ ಆಡಳಿತ ನೀಡುವ ಎಎಪಿಯನ್ನು ಜನರು ಬೆಂಬಲಿಸಬೇಕು ಎಂದು ಕೇಳಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಸಂಯೋಜಕ ಜಿ.ಆರ್.ವಿದ್ಯಾರಣ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಸಂಪತ್ ಕುಮಾರ್, ಧರ್ಮಶ್ರೀ, ಮೊಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: