
ಮೈಸೂರು
ಕಟ್ಟಡ ಕುಸಿತ ಸ್ಥಳಕ್ಕೆ ಶಾಸಕ ನಾಗೇಂದ್ರ ಭೇಟಿ; ಪರಿಶೀಲನೆ; ಅಧಿಕಾರಿಗಳ ವಿರುದ್ಧ ಗರಂ
ಮೈಸೂರು,ಮೇ.26:- ಶಿವರಾಂ ಪೇಟೆ ರಸ್ತೆಯಲ್ಲಿ ಕಟ್ಟಡವೊಂದು ಕುಸಿದಿದ್ದು, ಪಾಲಿಕೆಯ ಅಧಿಕಾರಿಗಳೊಂದಿಗೆ ಶಾಸಕ ಎಲ್.ನಾಗೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಕುಸಿತಗೊಂಡ ಕಟ್ಟಡದ ಸಂಪೂರ್ಣ ತೆರವಿಗೆ ಸೂಚನೆಯನ್ನು ನೀಡಿದರು. ಚಾಮರಾಜ ಕ್ಷೇತ್ರದ ಅಪಾಯಕಾರಿ ಕಟ್ಟಡಗಳ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಲೀಕರಿಗೆ ಸೋಟೀಸ್ ನೀಡಲು ಸೂಚಿಸಿದರು. ಈ ಕುರಿತು ಗಮನ ಹರಿಸದ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕರು ಶಿಥಿಲಾವಸ್ಥೆಯ ಕಟ್ಟಡ ತೆರವು ಮಾಡದೇ ಅಪಾಯ ಸಂಭವಿದಲ್ಲಿ ನೀವೇ ಹೊಣೆಗಾರರಾಗುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ತಡವಾಗಿ ಬಂದ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ವಿರುದ್ಧವೂ ಶಾಸಕರು ಗರಂ ಆದ ಘಟನೆ ನಡೆದಿದೆ. ಕಟ್ಟಡ ಕುಸಿತಗಳ ಕುರಿತು ಪ್ರತಿಕ್ರಿಯಿಸಿ ನಗರಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ನಿಮ್ಮ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿನ ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡಿ ತೆರವುಗೊಳಿಸಲು ಹೇಳಿದ್ದೇನೆ. ಈ ಕಟ್ಟಡ ಪ್ರಕರಣ ನ್ಯಾಯಾಲಯದಲ್ಲಿದೆ. ಅದಕ್ಕಾಗಿ ಅಧಿಕಾರಿಗಳು ಯಾರೂ ಈ ಕಡೆ ತಿರುಗಿ ನೋಡಲ್ಲ, ಕೋರ್ಟ್ ಲ್ಲಿರೋ ಸ್ಟೇ ನ ತೆರವು ಮಾಡುವ ಕೆಲಸ ಅಧಿಕಾರಿಗಳು ಮಾಡುತ್ತಿಲ್ಲ. ಚುರುಕು ಮುಟ್ಟಿಸುತ್ತೇನೆ. ಈ ರೀತಿ ಮುಂದೆ ಕಟ್ಟಡ ಬಿದ್ದು ಸಾವು ನೋವು ಸಂಭವಿಸಿದಲ್ಲಿ ಅದಕ್ಕೆ ಸಂಪೂರ್ಣವಾಗಿ ಪಾಲಿಕೆಯ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ ಎಂದರು.
ಸರ್ಕಾರಿ ಕಟ್ಟಡ, ಬೇರೆ ಇನ್ನಿತರ ಕಟ್ಟಡಗಳಿರಬಹುದು ಎಲ್ಲದಕ್ಕೂ ನೋಟೀಸ್ ಕೊಡಲೇಬೇಕು. ಹಳೆ ಬಿಲ್ಡಿಂಗ್ ನವರಿಗೆ ನೋಟಿಸ್ ಕಳಿಸಿ, ಸಾವು ನೋವಿಗೆ ಕಾರಣರಾಗಬಾರದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)