ಕರ್ನಾಟಕಪ್ರಮುಖ ಸುದ್ದಿಮೈಸೂರು

ಗುರು ಸನ್ಮಾರ್ಗದಲ್ಲಿ ಸಾಗಲು ನಮಗೆ ಸಹಾಯ ಮಾಡುತ್ತಾರೆ : ಗೋವಾ ಸಿಎಂ ಪ್ರಮೋದ್ ಸಾವಂತ್

ಮೈಸೂರು,ಮೇ.26:- ಗುರು ನಮಗೆ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಸನ್ಮಾರ್ಗದಲ್ಲಿ ಸಾಗಲು ಸಹಾಯ ಮಾಡುತ್ತಾರೆಂದು ಗೋವಾದ ಮುಖ್ಯಮಂತ್ರಿ  ಪ್ರಮೋದ್ ಸಾವಂತ್ ತಿಳಿಸಿದರು.

ಅವರಿಂದು ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗಣಪತಿ ಸಚ್ಚಿದಾನಂದ ಶ್ರೀಗಳ 80ನೇ ವರ್ಧಂತಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರುಗಳಿಗೆ ವಿಶೇಷವಾದ ಮಹತ್ವವಿದೆ. ಮಾನವನಿಗೆ ಗುರು ಎಲ್ಲಕ್ಕಿಂತಲೂ ಮಿಗಿಲು. ಗುರು ಶಬ್ದವು ಎರಡು ಶಬ್ದಗಳು ಸೇರಿ ಆಗಿವೆ. ಗುರುವಿನಲ್ಲಿ ಗು ಅರ್ಥ ಕತ್ತಲು, ರು ಅರ್ಥ ಬೆಳಕು. ಗುರು ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುತ್ತಾರೆಂದು ತಿಳಿಸಿದರು.

ಗುರು ದೀಪವಿದ್ದಂತೆ.   ಶಿಷ್ಯರ ಜೀವನವನ್ನು ಪ್ರಕಾಶಿಸುವಂತೆ ಮಾಡುತ್ತಾರೆ. ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಜೀವನ ಮತ್ತವರ ಕಾರ್ಯ ಮಹತ್ತರವಾದದ್ದು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅದ್ಭುತವಾಗಿ ಹೇಳಿದ್ದರು. ಸಂತರು ಪರೋಪಕಾರ ಮಾಡಲೆಂದೇ ಜನ್ಮ ತಾಳುತ್ತಾರೆ. ಓರ್ವ ಸಜ್ಜನ ಪರೋಪಕಾರಿ ಸಂತರಾಗಿರುವ ಕಾರಣ ಅವರು ತಮ್ಮ ಸಂಪೂರ್ಣ ಜೀವನವನ್ನು ಯಾವುದೇ ಭೇದಭಾವವಿಲ್ಲದೇ ಮಾನವರ ಜೀವನದ ಉದ್ಧಾರಕ್ಕಾಗಿಯೇ ಸಮರ್ಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಧ್ಯಾನ ಹಾಗೂ ಸಂಗೀತಕ್ಕೆ ಹೆಸರುವಾಸಿಯಾಗಿದ್ದಾರೆ . ಅವರು ಪ್ರಾಚೀನ ವೈದಿಕ ಸಂಪ್ರದಾಯಗಳನ್ನು ಉತ್ತೇಜಿಸುವ ದೈವಿಕ ಮಾರ್ಗದರ್ಶಿ ಎಂದು ಪರಿಗಣಿಸಲ್ಪಟ್ಟಿದ್ದಾರೆ ಎಂದು   ಬಣ್ಣಿಸಿದರು.

ಶ್ರೀಗಳು ನಾದ ಬ್ರಹ್ಮ .ಅವರ ಈ ಉಪಾಸನೆಯು ರಾಷ್ಟ್ರಕ್ಕೆ ಒಂದು ದೊಡ್ಡ ಸೇವೆಯಾಗಿದೆ ಮತ್ತು ನಮ್ಮ ಸಂಗೀತ ಪರಂಪರೆಯನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ದತ್ತಾತ್ರೇಯರು ಇರುವೆಯಿಂದ ಆನೆಯವರೆಗಿನ ಪ್ರಕೃತಿಯಲ್ಲಿ 24 ಗುರುಗಳನ್ನು ಕಂಡುಕೊಂಡಿದ್ದಾರೆ ಎಂದು ತಿಳಿದಿದೆ, ಇದು ಪ್ರಕೃತಿಯನ್ನು ಆರಾಧಿಸುವ ಸಾಮರಸ್ಯವನ್ನು ತೋರಿಸುತ್ತದೆ. ಪರಿಸರ ಸಂರಕ್ಷಣೆ, ಶುಕ ವನದ ಸ್ಥಾಪನೆ ಮತ್ತು ಪಕ್ಷಿಗಳ ಪುನರ್ವಸತಿಗಾಗಿ ಶ್ರಮಿಸುತ್ತಿರುವ ಪೂಜ್ಯ ಸ್ವಾಮಿಗಳು ನಮ್ಮೊಂದಿಗೆ ಇರುವುದಕ್ಕೆ ನಾವು ಧನ್ಯರು ಎಂದು ಹೇಳಿದರು. ಈ ಪಕ್ಷಿಧಾಮವು 2100 ಹೆಚ್ಚು ಪಕ್ಷಿಗಳನ್ನು ಹೊಂದಿದೆ. ಪರಿಸರ ಹಾಗೂ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವ ಇಂತಹ ಕಾರ್ಯಗಳು ಅತ್ಯಂತ ದೈವಿಕವಾದುದು ಮತ್ತು ಮುಂದಿನ ಪೀಳಿಗೆಗೆ ಸುಸ್ಥಿರತೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಸ್ವಾಮೀಜಿಯವರ ಕೆಲಸವನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ ನಂತಹ ಅನೇಕ ಪ್ರಶಸ್ತಿಗಳು ಮತ್ತು ಮನ್ನಣೆಗಳಿಂದ ಗುರುತಿಸಲಾಗಿದೆ.  ಸ್ವಾಮೀಜಿಯವರು ಸಂಗೀತಕ್ಕೆ ಹೆಸರುವಾಸಿಯಾಗಿದ್ದಾರೆ.

ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಗೋವಾದ ಸಾಂಸ್ಕೃತಿಕ ಶ್ರೀಮಂತ ಗುರುತನ್ನು ಉತ್ತೇಜಿಸಲು ನಾವು ಕೆಲಸ ಮಾಡುತ್ತೇವೆ ಎಂದು  ತಿಳಿಸಿದರು.

ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಬಾಲ ಸ್ವಾಮೀಜಿ ಆಗಿದ್ದಾರೆ. ಅವರು ಶ್ರೀಮಂತ ಜ್ಞಾನ ವೇದಗಳನ್ನು ಭಕ್ತರಿಗೆ ಸರಳ ಭಾಷೆಯಲ್ಲಿ ಭಾಷಾಂತರಿಸುವ ಧರ್ಮದ ಕಡೆಗೆ ಅವರ ಮಹಾನ್ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಬಣ್ಣಿಸಿದರು.

ವೇದಗಳ ಶ್ರೀಮಂತ ಸಂಪ್ರದಾಯಗಳನ್ನು ಪ್ರಚಾರ ಮಾಡುವಲ್ಲಿ ಇದರ ಪ್ರಮುಖ ಕಾರ್ಯವು ಇದೇ ರೀತಿ ಮುಂದುವರಿಯಲಿ ಎಂದು ಸಿಎಂ ಹಾರೈಸಿದರು.

ಪೂಜ್ಯ ಸ್ವಾಮಿಗಳ ಜನ್ಮದಿನದ ಇಂತಹ ಪುಣ್ಯ ಸಂದರ್ಭದಲ್ಲಿ ಉಪಸ್ಥಿತರಿರುವುದು ನನ್ನ ಅದೃಷ್ಟ. ಗೋವಾದ ಸಾಂಸ್ಕೃತಿಕ ಪರಂಪರೆ ಗೋವಾದ ದತ್ತ ದೇವಾಲಯಗಳಿಗೆ ಭೇಟಿ ನೀಡುವಂತೆ ಸ್ವಾಮೀಜಿ ಅವರನ್ನು ವಿನಂತಿಸುತ್ತೇನೆ. ಗೋವಾ ಅನೇಕ ಸಂತರಿಂದ ಆಶೀರ್ವದಿಸಲ್ಪಟ್ಟ ಪುಣ್ಯಭೂಮಿಯಾಗಿದೆ. ಸ್ವಾಮಿಜಿ ಅವರು ಭೇಟಿ ನೀಡಿ ಗೋವಾವನ್ನು ಆಶೀರ್ವದಿಸುವಂತೆ ನಾವು ವಿನಂತಿಸುತ್ತೇವೆ ಎಂದು  ನುಡಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಭಕ್ತರಿಗೆ ಆಶೀರ್ವಚನ ನೀಡಿ ಯೋಗಿ,ಭೋಗಿ,ತ್ಯಾಗಿ,ವಿರಾಗಿ ಎಲ್ಲರೂ ಆ ದೇವನ ಮಕ್ಕಳು.ಆದರೆ ಎಲ್ಲರಿಗೂ ಗುರು ದತ್ತಾತ್ರೇಯ ಎಂದು ನುಡಿದರು.
ದತ್ತಾತ್ರೇಯನ ನಾಮ ಸ್ಮರಣೆಯಿಂದ ಎಲ್ಲರೂ ಸಂತುಷ್ಟರಾಗಬಹುದು ಎಂದು ತಿಳಿಸಿದರು.
ನೀವು ಯಜ್ಞ, ಯಾಗ,ಹೋಮ,ವಿಶೇಷ ಅಭಿಶೇಕ ಏನೇ ಮಾಡಿ ಆದರೆ ಆ ಗುರು ದತ್ತನ ಸ್ಮರಣೆಯೊಂದಿದ್ದರೆ ಸಾಕು ಅವನ ಕೃಪೆ ದೊರೆಯುತ್ತದೆ ಎಂದು ಶ್ರೀಗಳು ಹೇಳಿದರು.
ಅವರವರ ಕರ್ಮಗಳ ಅನುಸಾರ ಜೀವನ ಸಾಗುತ್ತದೆ.ಆದರೆ ನಾವು ಮಾಡುವ ಪಾಪಗಳನ್ನು ತೊಡೆದು ಹಾಕಲು ಸದ್ಗುರು ದತ್ತನ ಆರಾಧನೆಯೊಂದೇ ದಾರಿ ಎಂದು ಸ್ವಾಮೀಜಿಯವರು ಬಣ್ಣಿಸಿದರು.
ನಾನೂ ಕೂಡಾ ದತ್ತನ ಆರಾದಕ ಎಲ್ಲರಿಗೂ ಒಳಿತಾಗಲಿ ಎಂದು ಹರಿಸಿದರು.
ಗೋವಾದಿಂದ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ‌ಜೀ ಆಗಮಿಸಿದ್ದಾರೆ ಅವರಿಗೆ ದೇವರು ಇನ್ನೂ ಹೆಚ್ಚಿನ ಪದವಿ ಕರುಣಿಸಲಿ. ಉತ್ತಮ ಆರೋಗ್ಯ ಆಯಸ್ಸು, ಶ್ರೇಯಸ್ಸು ಸಿಗಲಿ ಎಂದು ಸ್ವಾಮೀಜಿಗೆ ಶುಭ ಹಾರೈಸಿದರು.

 

ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಶುಭ ಸಂದರ್ಭದಲ್ಲಿ ಭಾಗವಹಿಸಿ ಶ್ರೀಗಳಿಗೆ ಶುಭ ಕೋರಿ, ಶ್ರೀಗಳಿಂದ ಆಶೀರ್ವಾದ ಪಡೆದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: