ಪ್ರಮುಖ ಸುದ್ದಿಮೈಸೂರು

ಬಿಜೆಪಿಯವರಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ, ನಾವು ಹುಟ್ಟಿಸಿದ ಮಕ್ಕಳನ್ನು ನಮ್ಮ ಮಕ್ಕಳು ಅಂತಾರೆ : ಸಿ.ಎಂ ಇಬ್ರಾಹಿಂ ವ್ಯಂಗ್ಯ

ಮೈಸೂರು,ಮೇ.26:-  ಬಿಜೆಪಿಯವರಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿಯೇ ಇಲ್ಲ, ನಾವು ಹುಟ್ಟಿಸಿದ ಮಕ್ಕಳನ್ನು ನಮ್ಮ ಮಕ್ಕಳು ಅಂತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದರು.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಮ್ಮ ಹುಡುಗರನ್ನು ಕರೆದುಕೊಂಡು ಕಾಂಗ್ರೆಸ್ ನವರು ಹೋದರು. ಸ್ವಂತ ಶಕ್ತಿಯಿಂದ ಕೆಲಸ ಮಾಡಿ. ರಾಜಾಹುಲಿಗೆ ಮಗನಿಗೆ ಒಂದು ಸೀಟ್ ಕೊಡಿಸಲು ಆಗಿಲ್ಲ. ಯಡಿಯೂರಪ್ಪನವರಿಗೆ ಇದಕ್ಕಿಂತ್ ಅವಮಾನ ಇನ್ನೇನು ಬೇಕು? ಮಾಜಿ ಸಿಎಂ ಬಿಎಸ್ ವೈ ಬಿಜೆಪಿಯನ್ನು ಕಟ್ಟಿದವರು. ಆದರೆ  ಬಿ.ಎಲ್.ಸಂತೋಷ್ ಅವರನ್ನು ನಾನು ಅಭಿನಂದಿಸುತ್ತೇನೆ. ಬಿ.ಎಲ್.ಸಂತೋಷ್ ಆರ್ ಎಸ್ ಎಸ್ ನವರೇ ಇರಬಹುದು. ಹುಡುಕಿ ಹುಡುಕಿ ಕಾರ್ಯಕರ್ತರಿಗೆ ಅಧಿಕಾರ ಕೊಡುತ್ತಿದ್ದಾರೆ. ದುಡ್ಡಿದ್ದವರಿಗೆ  ಮಣೆಹಾಕುತ್ತಿಲ್ಲ ಎಂದು ಪ್ರಶಂಸಿಸಿದರು. ಆದರೆ ಅವರದು ಕೇಶವಕೃಪ, ನಮ್ಮದು ಬಸವಕೃಪ, ಅದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ತಿಳಿಸಿದರು.

ಜೆಡಿಎಸ್ ನಿಂದ ಮರಿತಿಬ್ಬೇಗೌಡ ಅಂತರ ಕಾಯ್ದುಕೊಂಡಿರುವ ಕುರಿತು ಪ್ರತಿಕ್ರಿಯಿಸಿ ಮನೆಯಲ್ಲಿದ್ದಾಗ ಜಗಳ ನಡೆಯುವುದು ಸಹಜ. ಮರಿತಿಬ್ಬೇಗೌಡರ ಜೊತೆ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು. ಮುಂದೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಜಿ.ಟಿ.ದೇವೇಗೌಡರ ಜೊತೆಯೂ ಮಾತನಾಡುತ್ತೇನೆ. ಮೈಸೂರಿನ ಎಲ್ಲಾ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಟೈಟಲ್ ತೆಗೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯಿಸಿ ಕಳೆದ 70ವರ್ಷದಿಂದ ಬರೆದುಕೊಂಡು ಬಂದಿದ್ದಾರೆ. ಚಿತ್ರದಲ್ಲಿ ಟಿಪ್ಪು ಸುಲ್ತಾನ್ ರನ್ನು ಹುಲಿಯ ಜೊತೆ ತೋರಿಸಿದ್ದಾರೆ. ಹಾಗಾದರೆ ಹಿಂದಿನ ಕಾಲದಲ್ಲಿ ಫೋಟೋಗ್ರಫಿ ಇತ್ತಾ? ಹುಲಿ ಹೊಡೆಯಲು ಹೋಗಿರುವುದನ್ನು ಯಾರಾದರೂ ಪೋಟೋ ತೆಗೆದಿದ್ದಾರಾ? ಯಡಿಯೂರಪ್ಪನವರನ್ನು ಹುಲಿಯಾ ಅಂತೀವಿ, ರಾಜಾಹುಲಿ ಅಂತೀವಿ, ಹಾಗಾದರೆ ಅವರು ಕಾಡಿನಲ್ಲಿ ಇದ್ದಾರಾ?  ತಗೊಂಡು ಹೋಗಿ ಬಿಡಿ ಝೂಗೆ, ಹೊರಗಡೆ  ಯಾಕೆ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು ಸಂಸದರಾಗಿ ಹೇಗೆ ಮಾತನಾಡಬೇಕು ಅನ್ನೋದು ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

ಮೈಸೂರು ರಾಷ್ಟ್ರಕವಿ ಕುವೆಂಪು ಅವರ ನಾಡು. ಪುಟ್ಟಪ್ಪನವರ ಬಳಿ ನಾವೆಲ್ಲ ಪಾಠವನ್ನು ಕೇಳಿದ್ದೇವೆ. ಪುಟ್ಟನವರ ಪಠ್ಯಗಳನ್ನು ತೆಗೆಯಲು ಹೊರಟಿದ್ದಾರೆ. ನಮ್ಮವ್ವ ಕರ್ನಾಟಕ ಮಾತೆ, ನಮ್ಮ ಅಜ್ಜಿ ಭಾರತಮಾತೆ. ಮೊದಲು ಅವ್ವನ ನೋಡಿ ಅಂದರೆ ಅಜ್ಜಿ ನೋಡಲು ಹೊರಟಿದ್ದಾರೆ ಎಂದು ಲೇವಡಿಯಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: