ಕರ್ನಾಟಕಪ್ರಮುಖ ಸುದ್ದಿ

ಮೇ 31 ರಂದು ಪ್ರಧಾನಮಂತ್ರಿ ಅವರಿಂದ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ

ರಾಜ್ಯ(ಮಡಿಕೇರಿ) ಮೇ.27:-ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಮೇ, 31 ರಂದು ವರ್ಚುವಲ್ ಮೂಲಕ ವಿಡಿಯೋ ಸಂವಾದ ನಡೆಯಲಿದೆ.
ಈ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೂ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್‍ನಲ್ಲಿ ಮೇ, 31 ರಂದು ಬೆಳಗ್ಗೆ 9.30 ಗಂಟೆಗೆ ರಾಜ್ಯ ಮಟ್ಟದ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ವರ್ಚುವಲ್ ಮೂಲಕ ನಡೆಯುವ ಫಲಾನುಭವಿಗಳೊಂದಿನ ಸಂವಾದ ಕಾರ್ಯಕ್ರಮದ ವೀಕ್ಷಣೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಪೋಷಣಾ ಅಭಿಯಾನ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆ ಈ ಯೋಜನೆಗಳ ಬಗ್ಗೆ ಪ್ರಧಾನಮಂತ್ರಿ ಅವರು ಆಯ್ದ ಫಲಾನುಭವಿಗಳ ಜೊತೆ ವರ್ಚುವಲ್ ಮೂಲಕ ವಿಡಿಯೊ ಸಂವಾದ ನಡೆಸಲಿದ್ದು, ಈ ಕಾರ್ಯಕ್ರಮ ವೀಕ್ಷಣೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಈ ಯೋಜನೆಗಳ ಜಿಲ್ಲೆಯ ಫಲಾನುಭವಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.
ಈ ಸಂಬಂಧ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಯಿತು. ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ವಿವಿಧ ಇಲಾಖೆ ಅಧಿಕಾರಿಗಳು ವಿಡಿಯೋ ಸಂವಾದ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: