ಮೈಸೂರು

ಸಮಸ್ಯೆ ಹೇಳುವವರಿಗಿಂತ ಪರಿಹಾರ ಕಂಡುಕೊಳ್ಳುವವರ ಸಂಖ್ಯೆ ಹೆಚ್ಚಬೇಕು : ಡಾ. ಹರೀಶ್ ಹಂದೆ

ಮೈಸೂರು, ಮೇ.26:- ಸಮಸ್ಯೆ ಹೇಳುವವರಿಗಿಂತ ಪರಿಹಾರ ಕಂಡುಹಿಡಿಯುವವರ ಸಂಖ್ಯೆ ಹೆಚ್ಚಬೇಕಿದೆ ಎಂದು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್‍ನ ಸಹ-ಸಂಸ್ಥಾಪಕರು ಮತ್ತು ಅಧ್ಯಕ್ಷರು ಹಾಗೂ ಸೆಲ್ಕೋ ಫೌಂಡೇಶನ್‍ನ ಪ್ರಧಾನ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಹರೀಶ್ ಹಂದೆಯವರು ತಿಳಿಸಿದರು.

ಅವರು ಇಂದು ಮೈಸೂರು ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ ಅಂಗವಾಗಿ ‘ಬಡತನ ಮತ್ತು ಸುಸ್ಥಿರತೆ’ ವಿಷಯದ ಕುರಿತು ದತ್ತಿಯ 11ನೇ ಉಪನ್ಯಾಸ ನೀಡಿದರು. ಭಾರತದಲ್ಲಿ ಸಮಸ್ಯೆಗಳನ್ನು ಹುಡುಕವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಅವುಗಳಿಗೆ ಪರಿಹಾರೋಪಾಯಗಳನ್ನು ಕಂಡುಹಿಡಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ದೇಶದ ಸಮಸ್ಯೆಗಳನ್ನು ಕೇವಲ ವಿಮರ್ಶೆ ಮಾಡುತ್ತಾ ಸಮಯ ವ್ಯರ್ಥ ಮಾಡದೆ, ಅದನ್ನು ಸರಿ ಮಾಡುವುದರ ಬಗ್ಗೆ ಯೋಚಿಸಬೇಕಿದೆ ಮತ್ತು ಯೋಜಿಸಬೇಕಿದೆ. ಭಾರತೀಯರು ಪ್ರತಿಭಾವಂತರು, ಪ್ರತಿಯೊಬ್ಬರೂ ಬದಲಾವಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ. ನಮ್ಮ ದೇಶದ ಪ್ರತಿಯೊಬ್ಬರಿಗೂ ಆ ಶಕ್ತಿ ಮತ್ತು ಸಾಮರ್ಥ್ಯಗಳಿವೆ. ಜಗತ್ತಿನ ಇತರ ದೇಶಗಳು ಹೊಂದಿರುವ ಸಮಸ್ಯೆಗಳನ್ನೇ ಭಾರತವೂ ಹೊಂದಿದೆ. ಪದವಿಗಳನ್ನು ತೆಗೆದುಕೊಂಡು ಕಛೇರಿಗಳಲ್ಲಿ ಕುಳಿತರೆ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ಕೋವಿಡ್ ಕೇವಲ ಕೆಲವರನ್ನು ಮಿಲೇನಿಯರನ್ನಾಗಿಸಿತು. ಆದರೆ ಸಾಕಷ್ಟು ಜನರನ್ನು ಬಡವರನ್ನಾಗಿಸಿತು. ಕೆಲವು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಯಿತು. ಆದರೆ ರೈತರು, ರಸ್ತೆ ಬದಿ ವ್ಯಾಪಾರಿಗಳು ಮನೆಯಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವಿಲ್ಲ. ಶ್ರೀಮಂತ ವರ್ಗದವರು ಸಬ್ಸಿಡಿಯನ್ನು ಬಯಸುತ್ತಾರೆ. ಅವರು ಬಯಸುವ ಸಬ್ಸಿಡಿಯ ನಿಜವಾದ ಹೂಡಿಕೆದಾರರು ಬಡವರಾಗಿರುತ್ತಾರೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಬಡತನಕ್ಕೆ ವಿರುದ್ಧವಾಗಿದೆ. ದೇಶದ ಬಗ್ಗೆ ಹೆಮ್ಮೆಯಿರಬೇಕು. ಬಡತನವನ್ನು ಹೇಗೆ ನಿವಾರಿಸಬೇಕು ಎಂದು ಯೋಚಿಸಬೇಕಿದೆ. ಯುವಕರು ಈ ನಿಟ್ಟಿನಲ್ಲಿ ದೃಢ ಸಂಕಲ್ಪ ಮಾಡಬೇಕು. ಭಾರತ ಈ ಬಗೆಯ ಸಂಶೋಧನೆಗೆ ಕೇಂದ್ರವಾಗಿದೆ ಎಂದು ತಿಳಿಸಿದರು.
ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಭಾರತದಲ್ಲಿ ಎಲ್ಲ ಸಮಸ್ಯೆಗಳೂ ಇವೆ. ಅವಕ್ಕೆ ಪರಿಹಾರೋಪಾಯಗಳೂ ಸಹ ಇವೆ. ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಮಸ್ಯೆಗಳಿಗೆ ಹಿಂದೆ ಹಳ್ಳಿಗಳಲ್ಲಿ ಅಲ್ಲೇ ಪರಿಹಾರವನ್ನು ಕಂಡುಹಿಡಿಯಲಾಗುತ್ತಿತ್ತು. ಜನರಲ್ಲಿ ಸಾಮಾನ್ಯವಾದ ತಿಳುವಳಿಕೆ ಬರಬೇಕು. ಬಡತನ ಸುಸ್ಥಿರತೆಗೆ ಎಂದಿಗೂ ಅಡ್ಡಿ ಬರುವುದಿಲ್ಲ. ಮಾಡುವ ಕೆಲಸದಲ್ಲಿ ತಾರತಮ್ಯ ಭಾವನೆ ಇರಬಾರದು. ಸೇವೆ ಮುಖ್ಯವಾಗಬೇಕೆ ಹೊರತು ಹಣ ಮುಖ್ಯವಾಗಬಾರದು. ಕೋಟಿ ಹಣದ ಒಡೆಯರಾಗುವುದಕ್ಕಿಂತ ಕೋಟಿ ಜನಗಳ ಆಸ್ತಿಯಾಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್‍  ಸುತ್ತೂರು ಶ್ರೀಮಠ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಮಾಜಕ್ಕೆ ಪೂರಕವಾದ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಇಂದಿನ ಉಪನ್ಯಾಸದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸದುಪಯೋಗವಾಗಲಿದೆ. ಬದುಕಿನಲ್ಲಿ ಉಂಟಾಗುವ ಸಮಸ್ಯೆಗಳಿಗೆ ಹತ್ತಿರದಲ್ಲಿಯೇ ಪರಿಹಾರವಿರುತ್ತದೆ ಎಂಬುದನ್ನು ನಾವೆಲ್ಲರೂ ಅರಿತು ನಡೆಯಬೇಕಿದೆ ಎಂದು ಹೇಳಿದರು.
ಶ್ರೀ ಎಂ ಅವರ 10ನೇ ದತ್ತಿ ಉಪನ್ಯಾಸ ‘ಸಾಧನಾ-ಪಾತ್ ಆಫ್ ಲಿಬರೇಷನ್’ ಕೃತಿಯನ್ನು ವಿಡಬ್ಲ್ಯೂಎಫ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ  ಬಿ.ಆರ್. ಪೈರವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಶ್ರೋತೃಗಳ ಪ್ರಶ್ನೆಗಳಿಗೆ ಡಾ. ಹರೀಶ್ ಹಂದೆಯವರು ಉತ್ತರಿಸಿದರು. ಜೆಎಸ್‍ಎಸ್ ಲಲಿತಕಲಾ ವೃಂದದ  ರೂಪ ಗುರುಪ್ರಸಾದ್ ಮತ್ತು  ಕೆ.ಜಿ. ವಿನುತರವರು ಪ್ರಾರ್ಥಿಸಿದರು. ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ. ಸಿ.ಜಿ. ಬೆಟಸೂರಮಠ ಸ್ವಾಗತಿಸಿದರು.  ಆರ್. ಮಹೇಶ್ ವಂದಿಸಿದರು. ಪ್ರೊ. ಮೊರಬದ ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: