ದೇಶಪ್ರಮುಖ ಸುದ್ದಿ

ಆರ್ಯನ್ ಖಾನ್ ಸೇರಿ 6 ಮಂದಿಗೆ ಡ್ರಗ್ ಪ್ರಕರಣದಲ್ಲಿ ಎನ್.ಸಿ.ಬಿ.ಯಿಂದ ಕ್ಲೀನ್‌ಚಿಟ್

ದೇಶ(ನವದೆಹಲಿ),ಮೇ.27 : ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರುಖ್‍ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಎನ್‍ಸಿಬಿ ಕ್ಲೀನ್‌ಚಿಟ್ ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪದಿಂದ ಮುಕ್ತಗೊಳಿಸಲಾಗಿದೆ.

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸೈನ್ಸ್ (NDPS) ಕಾಯ್ದೆಯಡಿ ವಿಶೇಷ ನ್ಯಾಯಾಧೀಶರ ಮುಂದೆ ಎನ್.ಸಿ.ಬಿ ಇಂದು ಪ್ರಕರಣದ ಆರೋಪಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ.

ಚಾರ್ಜ್‍ಶೀಟ್‍ನಲ್ಲಿ, ಎನ್‍ಸಿಬಿಯ ವಿಶೇಷ ತನಿಖಾ ತಂಡ (ಎಸ್‍ಐಟಿ) 20 ಆರೋಪಿಗಳಲ್ಲಿ 14 ಆರೋಪಿಗಳನ್ನು ಆರೋಪಿಸಿದ್ದು, ಖಾನ್ ಸೇರಿದಂತೆ 6 ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಚಾರಣೆ ನಡೆಸುತ್ತಿಲ್ಲ ಎಂದು ಹೇಳಿದೆ. ಆರ್ಯನ್ ಖಾನ್, ಅವಿನ್ ಶಾಹು, ಗೋಪಾಲ್ ಜಿ ಆನಂದ್, ಸಮೀರ್ ಸೈಘನ್, ಭಾಸ್ಕರ್ ಅರೋಡಾ ಮತ್ತು ಮಾನವ್ ಸಿಂಘಾರ ವಿರುದ್ಧ ತನಿಖೆ ನಡೆಸುತ್ತಿಲ್ಲ ಎಂದು ತಿಳಿಸಿದೆ.

20 ಮಂದಿಯ ಪೈಕಿ 14 ಮಂದಿಯ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಲಾಗುತ್ತಿದೆ. ಉಳಿದ 6 ಮಂದಿಯ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದ ಅರ್ಜಿ ಸಲ್ಲಿಸಲಾಗುತ್ತಿಲ್ಲ ಎಂದು ಎನ್‍ಸಿಬಿ ತನ್ನ ಮಾಧ್ಯಮ ಪ್ರಕಟಣೆಯಲ್ಲೂ ತಿಳಿಸಿದೆ.

ಅಕ್ಟೋಬರ್ 2, 2021 ರಂದು ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ಎನ್‍ಸಿಬಿ, ಆರ್ಯನ್ ಖಾನ್ ಸೇರಿ ಹಲವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿತು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ (ಎನ್‍ಡಿಪಿಎಸ್) ಕಾಯ್ದೆಯ ಸೆಕ್ಷನ್ 8(ಸಿ), 20(ಬಿ), 27, 28, 29 ಮತ್ತು 35 ರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಎನ್‍ಸಿಬಿ 13 ಗ್ರಾಂ ಕೊಕೇನ್, 5 ಗ್ರಾಂ ಮೆಫೆಡ್ರೋನ್ ಎಂಡಿ, 21 ಗ್ರಾಂ ಚರಸ್ ಮತ್ತು 22 ಎಂಡಿಎಂಎ ಎಕ್ಸ್‍ಟಾಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದೆ ಎಂದು ಈ ಹಿಂದೆ ಎನ್‍ಸಿಬಿ ಹೇಳಿತ್ತು. ಕೆಳ ಹಂತದ ನ್ಯಾಯಾಲಯಗಳಲ್ಲಿ ಜಾಮೀನು ನಿರಾಕರಿಸಿದ ಹಿನ್ನಲೆ ಮುಂಬೈ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಆರ್ಯನ್ ಖಾನ್, ಅಕ್ಟೋಬರ್ 28, 2021 ರಂದು ಜಾಮೀನು ಪಡೆದುಕೊಂಡಿದ್ದರು.(ಎಸ್.ಎಂ)

Leave a Reply

comments

Related Articles

error: