
ಕರ್ನಾಟಕಪ್ರಮುಖ ಸುದ್ದಿ
ರಾಜ್ಯದ ಎಲ್ಲ ರಂಗಗಳಲ್ಲೂ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ತೋರಿದ್ದಾರೆ ; ಸಿಎಂ ಬೊಮ್ಮಾಯಿ
ರಾಜ್ಯ(ಬೆಂಗಳೂರು),ಮೇ.27 : ಈ ಬಾರಿ ನಡೆದ ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ಅತೀ ಹೆಚ್ಚು ಆಕರ್ಷಣೆಯಾಗಿತ್ತು. ರಾಜ್ಯದ ಎಲ್ಲ ರಂಗಗಳಲ್ಲೂ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ತೋರಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದಾವೋಸ್ ಪ್ರವಾಸದ ನಂತರ ಇಂದು ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು, ಸುದ್ದಿಗೋಷ್ಠಿ ನಡೆಸಿ, ಪ್ರತಿ ಬಾರಿಯೂ ದಾವೋಸ್ ಆರ್ಥಿಕ ಶೃಂಗಸಭೆ ಜನವರಿಯಲ್ಲಿ ನಡೆಯುತ್ತದೆ. ಆದರೆ ಎರಡು ವರ್ಷಗಳಿಂದ ಕೋವಿಡ್-19 ಕಾರಣ ನಡೆದಿರಲಿಲ್ಲ. ಈ ವರ್ಷ ಮೇ ತಿಂಗಳಿನಲ್ಲಿ ನಡೆದಿದೆ. ಹಿಂದೆ ನಮ್ಮ ರಾಜ್ಯದಿಂದ ದೇವೇಗೌಡರು, ಎಸ್ಎಂ ಕೃಷ್ಣ, ಯಡಿಯೂರಪ್ಪ ಭಾಗವಹಿಸಿದ್ದರು.
ಈ ಬಾರಿಯ ಶೃಂಗಸಭೆ ಕುತೂಹಲ ಹುಟ್ಟಿಸಿತ್ತು. ಕೋವಿಡ್ ಬಳಿಕ ಆರ್ಥಿಕ ಹಿಂಜರಿತ ಇತ್ತು. ಆರ್ಥಿಕ ಹಿಂಜರಿತ, ಪರಿಸರದಲ್ಲಿನ ಬದಲಾವಣೆ ಬಗ್ಗೆ ಚರ್ಚಿಸಲಾಯಿತು. ದಾವೋಸ್ ಶೃಂಗ ಸಭೆಯಲ್ಲಿ ಭಾರತದಲ್ಲಿ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ವಹಿಸಿದ್ದರು. ನವೀಕರಿಸಬಹುದಾದ ಇಂಧನಗಳ ಮೇಲೆ ಉದ್ಯಮಿಗಳಿಗೆ ಹೂಡಿಕೆಗೆ ಹೆಚ್ಚು ಆಸಕ್ತಿ ನೀಡಿಲಾಗಿತ್ತು. ಅತೀ ಹೆಚ್ಚು ಆಕರ್ಷಣೆ ಆಗಿದ್ದು ಕರ್ನಾಟಕ. ರಾಜ್ಯದ ಎಲ್ಲ ರಂಗಗಳಲ್ಲೂ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ತೋರಿದ್ದಾರೆ ಎಂದು ತಿಳಿಸಿದ್ದಾರೆ.
ಉದ್ಯಮಿಗಳ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಯಿತು. ಮಣ್ಣಿನ ಕುರಿತ ಒಂದು ಸಮಾಲೋಚನೆಯಲ್ಲೂ ನಾನು ಭಾಗವಹಿಸಿದ್ದೆ. ಹಲವು ಕಂಪೆನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿವೆ. ಜ್ಯುಬಿಲೆಂಟ್ ಇಂಡಿಯಾ ಗ್ರೂಪ್ 700 ಕೋಟಿ ರೂ. ಬಂಡವಾಳ ಹೂಡಿಕೆಗೆ ನಿರ್ಧಾರಿಸಿದೆ. ದೇವನಹಳ್ಳಿ ಬಳಿ ಇವರು 10 ಎಕರೆ ಜಮೀನು ಖರೀದಿಸಿದ್ದಾರೆ. ಹಿಟಾಚಿ ಎನರ್ಜಿ ಸಂಸ್ಥೆಯೂ ಹೂಡಿಕೆಗೆ ಮುಂದಾಗಿದೆ. ಇವರು 2 ಸಾವಿರ ಇಂಜಿನಿಯರ್ಗಳನ್ನು ಈ ವರ್ಷ ನೇಮಕ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಸೀಮೆನ್ಸ್ ಹೆಲ್ದೀನಿಯರ್ಸ್ ಗ್ರೂಪ್ನವರು ಆರೋಗ್ಯ ಕ್ಷೇತ್ರದಲ್ಲಿ 1,600 ಕೋಟಿ ಬಂಡವಾಳ ಹೂಡುತ್ತಿದೆ. ಅನ್ ಇನ್ಬೇವ್ ಸಂಸ್ಥೆಯು ನಾನ್ ಆಲ್ಕೋಹಾಲಿಕ್ ಪಾನೀಯ ಉತ್ಪಾದನೆಗೆ ಮುಂದೆ ಬಂದಿದ್ದಾರೆ. ನೆಸ್ಲೆ ಸಂಸ್ಥೆಯವರ ಉದ್ಯಮ ಈಗಾಗಲೇ ನಂಜನಗೂಡಿನಲ್ಲಿದೆ. ಹೆಚ್ಚುವರಿಯಾಗಿ 700 ಕೋಟಿ ರೂ. ಬಂಡವಾಳ ಹೂಡಿಕೆಗೆ ನೆಸ್ಲೆ ಮುಂದಾಗಿದೆ. ದಸ್ಸಾಲ್ಸ್ ಸಿಸ್ಟಮ್ಸ್ನವರು 300 ಕೋಟಿ ರೂ. ಹೂಡಿಕೆಗೆ ಉತ್ಸುಕತೆ ತೋರಿದ್ದಾರೆ. ಮಿತ್ತಲ್ ಸಂಸ್ಥೆಯವರು 6 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿದೆ ಎಂದು ಹೇಳಿದ್ದಾರೆ.
ಭಾರತಿ ಎಂಟರ್ ಪ್ರೈಸಸ್ ಮೆಗಾ ಡಾಟಾ ಸೆಂಟರ್ ತೆರೆಯಲು ಮುಂದಾಗಿದೆ. ಅದಾನಿ ಗ್ರೂಪ್, ಡಾಲ್ಮಿಯಾ ಸಿಮೆಂಟ್, ಜಾನ್ಸನ್ ಕಂಟ್ರೋಲ್ಸ್, ಹನಿವೆಕ್, ಐಬಿಎಂ, ಐಕಿಯ ಸ್ಟೋರ್ಸ್, ಆಕ್ಸಿಸ್ ಬ್ಯಾಂಕ್ಗಳು ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಚರ್ಚಿಸಲಾಗಿದೆ. ದಾವೋಸ್ ಆರ್ಥಿಕ ಶೃಂಗ ಸಭೆಯಲ್ಲಿ ರಾಜ್ಯಕ್ಕೆ ಒಟ್ಟು 59,350 ಕೋಟಿ ರೂಗಳ ಬಂಡವಾಳ ಹೂಡಿಕೆ ಆಕರ್ಷಿಸಲು ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನವೆಂಬರ್ನಲ್ಲಿ ಎರಡು ಸಮ್ಮೇಳನಗಳು ನಡೆಯಲಿವೆ. ವಿಶ್ವ ಬಂಡವಾಳ ಹೂಡಿಕೆ ಸಮ್ಮೇಳನ ಮತ್ತು ಬೆಂಗಳೂರು ಟೆಕ್ ಸಮ್ಮಿಟ್ಗಳು ನಡೆಯಲಿವೆ. ಈ ಸಮ್ಮೇಳನದಲ್ಲಿ ಹಲವಾರು ಜಾಗತಿಕ ಉದ್ಯಮಿಗಳಿಗೆ ಆಹ್ವಾನಿಸಲಾಗಿದೆ ಎಂದಿದ್ದಾರೆ.
ಇದೇ ವೇಳೆ ಲಕ್ಷ್ಮಿ ಮಿತ್ತಲ್ ಜೊತೆ ಆಪರೇಷನ್ ಕಮಲದ ಮಾತುಕತೆ ವಿಚಾರವಾಗಿ ಮಾತನಾಡಿ, ಲಕ್ಷ್ಮಿ ಮಿತ್ತಲ್ ಅವರ ಜೊತೆ ಹೂಡಿಕೆ ಬಗ್ಗೆ ಮಾತಾಡಿದ್ದೇವೆ. ಆ ಮಾತುಕತೆ ಬಳಿಕ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತಾಡಿದ್ದೇವೆ. ಉದ್ಯಮಿಗಳು ಸಹಜವಾಗಿ ರಾಜ್ಯಗಳ ರಾಜಕೀಯ ಪರಿಸ್ಥಿತಿ ತಿಳಿದುಕೊಳ್ಳುತ್ತಾರೆ. ಎಲ್ಲ ಉದ್ಯಮಿಗಳೂ ರಾಜಕೀಯ ಪರಿಸ್ಥಿತಿ ಕೇಳಿದರು ಎಂದು ತಿಳಿಸಿದ್ದಾರೆ.
ನಂತರ ಯಾರೇ ಹೂಡಿಕೆಗೆ ಮುಂದಾದರೂ ಇಲ್ಲಿನ ಕಾನೂನು ಪಾಲಿಸಿ ಅವಕಾಶ ಕೊಡುತ್ತೇವೆ. ಲುಲು ಸಂಸ್ಥೆ ಜೊತೆ ಹೂಡಿಕೆ ಮಾಡಿಕೊಳ್ಳಬಾರದು ಅಂತ ಏನಿಲ್ಲ. ರಾಜಾಜಿನಗರದಲ್ಲಿರುವ ಲುಲು ಮಾರ್ಕೆಟ್ ಹಿಂದಿನ ಸರ್ಕಾರವಿದ್ದಾಗ ಬಂತು. ಅದು ಕಾನೂನು ಬದ್ಧವಾಗಿದೆಯಾ ಇಲ್ಲವೋ ಮಾಹಿತಿ ತರಿಸಿಕೊಳ್ಳುತ್ತೇನೆ. ದಾವೋಸ್ ಒಪ್ಪಂದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.(ಎಸ್.ಎಂ)