ಮೈಸೂರು

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ 67 ನೆಯ ರೈಲ್ವೆ ಸಪ್ತಾಹ ಆಚರಣೆ

ಮೈಸೂರು, ಮೇ.27:- ನೈಋತ್ಯ ರೈಲ್ವೆ ಮೈಸೂರು ವಿಭಾಗವು 67ನೇ ರೈಲ್ವೆ ಸಾಪ್ತಾಹಿಕ ಪ್ರಶಸ್ತಿ ಕಾರ್ಯಕ್ರಮವನ್ನು  ಇಂದು ಮೈಸೂರಿನ ರೈಲ್ವೆ ಕಲ್ಯಾಣ ಮಂಟಪದಲ್ಲಿ ಆಚರಿಸಿತು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ  ರಾಹುಲ್ ಅಗರ್ವಾಲ್ ಅವರು, ತಮ್ಮ ಕೆಲಸದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಿಬ್ಬಂದಿಗಳಿಗೆ ಪ್ರಶಸ್ತಿಗಳನ್ನು ನೀಡಿದರು. 2021-2022 ರ ಆರ್ಥಿಕ ವರ್ಷದಲ್ಲಿ ಪ್ರಶಂಸನೀಯ ಕಾರ್ಯಕ್ಷಮತೆಗಾಗಿ 86 ಸಿಬ್ಬಂದಿಗಳು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು ಮತ್ತು ಅವುಗಳೊಂದಿಗೆ 10 ಸಮೂಹ ಪ್ರಶಸ್ತಿಗಳನ್ನು ಸಹ ನೀಡಲಾಯಿತು.

ಬಾಣಸಂದ್ರ ರೈಲ್ವೆ ನಿಲ್ದಾಣವು ಮೈಸೂರು ವಿಭಾಗದಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿತು
ಮೈಸೂರಿನ ಚಾಲನ ಸಿಬ್ಬಂದಿಗಳ ವಿಶ್ರಾಂತಿಗೃಹಕ್ಕೆ ಅತ್ಯುತ್ತಮವಾಗಿ ನಿರ್ವಹಿಸಲಾದ ‘ರನ್ನಿಂಗ್ ರೂಮ್’ ಎಂದು ಪ್ರಶಸ್ತಿ ನೀಡಲಾಯಿತು
ಮೈಸೂರಿನ ಸಿಬ್ಬಂದಿ ಶಾಖೆಯ ಕಛೇರಿ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಕಛೇರಿಯೆಂದು ಪ್ರಶಸ್ತಿಯನ್ನು ಪಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನೈಋತ್ಯ ವಲಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ  ರಾಹುಲ್ ಅಗರ್ವಾಲ್ ರವರು 2021-22ನೇ ವರ್ಷದಲ್ಲಿ ವಿಭಾಗದ ಕಾರ್ಯವೈಖರಿ ಕುರಿತು ಮಾಹಿತಿ ನೀಡುತ್ತ ವಿಭಾಗವು 2021-22ನೇ ವರ್ಷದ ಒಟ್ಟಾರೆ ದಕ್ಷತೆಯ ಫಲಕವನ್ನು ಗೆದ್ದುಕೊಂಡಿದೆ. ಇದರ ಹೊರತಾಗಿ ವಿಭಾಗದ ವಿತ್ತ ಇಲಾಖೆ, ವಿದ್ಯುತ್, ವೈದ್ಯಕೀಯ ಮತ್ತು ಕಾರ್ಯನಿರ್ವಹಣಾ ಇಲಾಖೆಗಳು ಸಹ ನೈಋತ್ಯ ರೈಲ್ವೆಯ ವಲಯ ಮಟ್ಟದಲ್ಲಿ ದಕ್ಷತಾ ಫಲಕಗಳನ್ನು ಪಡೆದಿವೆ. ಹಾಗೆಯೆ, ಹುಬ್ಬಳ್ಳಿಯಲ್ಲಿ ನಡೆದ 67ನೇ ರೈಲ್ವೆ ಸಪ್ತಾಹ ಪ್ರಶಸ್ತಿಯ ಸಂದರ್ಭದಲ್ಲಿ ಅತ್ಯುತ್ತಮ ನಿರ್ವಹಣೆಯ ನಿಲ್ದಾಣವಾಗಿ (ಮೇಜರ್) ದಾವಣಗೆರೆ ರೈಲ್ವೆ ನಿಲ್ದಾಣ ಆಯ್ಕೆಯಾಗಿದೆ. ಈ ಸಾಧನೆಗಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು.

ಇದರ ಹೊರತಾಗಿ.
ಈ ವರ್ಷ ಮೈಸೂರು ವಿಭಾಗದ 6 ಅಧಿಕಾರಿಗಳು ಮತ್ತು 34 ಉದ್ಯೋಗಿಗಳನ್ನು 18 ಮೇ 2022 ರಂದು ನಡೆದ ರೈಲ್ವೆ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ವಲಯ ಮಟ್ಟದಲ್ಲಿ ನಮ್ಮ ಪ್ರಧಾನ ವ್ಯವಸ್ಥಾಪಕರು ಅವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ಪುರಸ್ಕರಿಸಿದ್ದಾರೆ.

2021-22 ರ ಕಾರ್ಯನಿರ್ವಹಣೆ,
ವಿಭಾಗವು ಒಟ್ಟಾರೆ 9.14 ದಶಲಕ್ಷ ಟನ್‌ಗಳ ಸರಕು ಸಾಗಣೆಯನ್ನು ಸಾಧಿಸಿ. (ಕಳೆದ ವರ್ಷ 6.91 ದಶಲಕ್ಷ ಟನ್) 32.20% ಪ್ರಗತಿ ಸಾಧಿಸಿದೆ.
ವಿಭಾಗದ ಮೂಲ ಆದಾಯವು ಕಳೆದ ವರ್ಷಕ್ಕಿಂತ +20.26% ರಷ್ಟು ಏರಿಕೆಯಾಗಿ 930.01 ಕೋಟಿ ರೂ. ತಲುಪಿದೆ
ರೈಲು ಗಾಡಿಗಳ ಸಮಯಪ್ರಜ್ಞೆ – ಮೇಲ್ / ಎಕ್ಸ್‌ಪ್ರೆಸ್ 99.17%.
ವಿಭಾಗವು 14.04 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿದೆ.
ವಿಭಾಗವು 9.12 ದಶಲಕ್ಷ ಯುನಿಟ್ ಇಂಧನವನ್ನು ಉಳಿಸಿದೆ, ಇದು ರೂ 80 ಕೋಟಿಗಳ ಉಳಿತಾಯಕ್ಕೆ ಕಾರಣವಾಯಿತು.
ಮೈಸೂರು ವಿಭಾಗದ ಐದು ಚಲನಾ ಸಿಬ್ಬಂದಿ ಕೊಠಡಿಗಳು ಈಗ ISO 9001:2015 ಪ್ರಮಾಣೀಕರಿಸಲ್ಪಟ್ಟಿವೆ
ಹಾಸನ, ಅರಸೀಕೆರೆ, ಬೀರೂರು ಮತ್ತು ಕಡೂರಿ ನಿಲ್ದಾಣಗಳಲ್ಲಿ ಪ್ರಯಾಣಿಕರ ಲಿಫ್ಟ್‌ ಗಳನ್ನು ಕಾರ್ಯಾರಂಭಗೊಳಿಸಲಾಯಿತು.
ನೈಋತ್ಯ ರೈಲ್ವೆಯಲ್ಲಿ ಮೈಸೂರು ವಿಭಾಗವು ಏಕೀಕೃತ ಬ್ಯಾಲೆನ್ಸ್ ಶೀಟ್ ಮಾಡ್ಯೂಲ್ ಅಳವಡಿಸಲಾಗಿದೆ ಮತ್ತು 100% ಕೋಚಿಂಗ್ ಬ್ಯಾಲೆನ್ಸ್ ಶೀಟ್ ಅನ್ನು ಅಳವಡಿಸಿದ ಮೊದಲ ವಿಭಾಗವಾಗಿದೆ.
ಭಾರತೀಯ ರೈಲ್ವೆಯಲ್ಲಿಯೇ, ಮೈಸೂರು ವಿಭಾಗವು ಸೇವೆ ಸಲ್ಲಿಸುತ್ತಿರುವ ಶೇಕಡ 100 ರಷ್ಟು ಉದ್ಯೋಗಿಗಳಿಗೆ ವಿಶಿಷ್ಟ ವೈದ್ಯಕೀಯ ಗುರುತಿನ ಚೀಟಿ ನೋಂದಣಿ ಮತ್ತು ಕಾರ್ಡ್‌ಗಳ ಉತ್ಪಾದನೆಯನ್ನು ಪೂರ್ಣಗೊಳಿಸಿದ ಮೊದಲ ವಿಭಾಗವಾಗಿದೆ.
ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದಕ್ಕಾಗಿ ವಿಭಾಗದಿಂದ ಹೊರಡುವ ವಿವಿಧ ರೈಲುಗಳಲ್ಲಿ ಹೆಚ್ಚುವರಿಯಾಗಿ 28 ಕೋಚ್‌ಗಳನ್ನು ಶಾಶ್ವತವಾಗಿ ಸೇರಿಸಲಾಗಿದೆ ಮತ್ತು 384 ಕೋಚ್‌ಗಳನ್ನು ತಾತ್ಕಾಲಿಕವಾಗಿ ಒದಗಿಸಲಾಗಿದೆ.
ಪರಿಸರಕ್ಕೆ ಅನುಕೂಲದ ಉಪಕ್ರಮದ ಮೇಲೆ, ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಮೈಸೂರಿನಲ್ಲಿ ಕಾರ್ಯಾರಂಭ ಮಾಡುವುದರ ಜೊತೆಗೆ ಸ್ವಚ್ಛ ಭಾರತ, ಪ್ಲಾಸ್ಟಿಕ್ ನಿಷೇಧ ಮತ್ತು ನೀರಿನ ಸಂರಕ್ಷಣೆ ಕುರಿತು ಹಲವಾರು ಜಾಥಾಗಳನ್ನು ನಡೆಸಲಾಗಿದೆ. ಹಸಿರೀಕರಣಕ್ಕಾಗಿ ಮಾಡುವ ನಿರಂತರ ಪ್ರಯತ್ನದಲ್ಲಿ ವಿಭಾಗದಲ್ಲಿ ಸುಮಾರು 3000 ಮರಗಳನ್ನು ನೆಡಲಾಗಿದೆ.
ಸಿಬ್ಬಂದಿ ಕಲ್ಯಾಣದ ವಿಷಯದಲ್ಲಿ, ಸಮಯ ಬದ್ಧವಾದ ಬಡ್ತಿಗಳನ್ನು ನೀಡಲಾಗಿದೆ ಮತ್ತು ತ್ವರಿತ ಪರಿಹಾರಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಯಿತು. ನಿವೃತ್ತಿ ಹೊಂದಿದ 90 ಸಿಬ್ಬಂದಿಗಳಿಗೆ ಸಾಮಾನ್ಯ ಇತ್ಯರ್ಥಗಳೊಂದಿಗೆ 750 ಉದ್ಯೋಗಿಗಳಿಗೆ ಬಡ್ತಿ/ಆರ್ಥಿಕ ಉನ್ನತ ದರ್ಜೆಯನ್ನು ನಿಗದಿತ ಸಮಯದೊಳಗೆ ನೀಡಲಾಗಿದೆ. ಸೂಕ್ತತೆಯ ಆಧಾರದ ಮೇಲೆ 101 ಬಡ್ತಿಗಳನ್ನು ಸಮಯದ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ.
ಡಿಜಿಟಲೀಕರಣದ ಪ್ರಯತ್ನಗಳನ್ನು ಮುಂದುವರೆಸಿ 2020-21 ರಲ್ಲಿ 97.84% ರಷ್ಟು ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿ (APAR) ಗಳನ್ನು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ ಮಾಡ್ಯೂಲ್‌ನಲ್ಲಿ ಪೂರ್ಣಗೊಳಿಸಲಾಗಿದೆ ಮತ್ತು 2021-22 ರ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿಗಳನ್ನು ಪ್ರಾರಂಭಿಸಲಾಗಿದೆ. ಸಕಾಲಿಕ ಮತ್ತು ತೊಂದರೆ-ಮುಕ್ತ ಅನುಭವಕ್ಕಾಗಿ ಎಲ್ಲಾ ಇತ್ಯರ್ಥ ಪ್ರಕರಣಗಳನ್ನು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ತೆ (HRMS) ಯಲ್ಲಿ ಪ್ರಕ್ರಿಯೆಗೊಳಿಸಲಾಗಿದೆ.
ಮೂಲಸೌಕರ್ಯ ವರ್ಧನೆಯ ವಿಷಯದಲ್ಲಿ ಸಂಪಿಗೆ ರಸ್ತೆ – ಅರಸೀಕೆರೆ ಮತ್ತು ಹಾವೇರಿ-ಕಾರಜಗಿ ಭಾಗಗಳ ನಡುವೆ 14.7 ಕಿ.ಮೀ.ಗಳಷ್ಟು ದ್ವಿಪಥ ಹಳಿಯ ಕಾರ್ಯಾರಂಭಿಸಲಾಯಿತು, ಜೊತೆಗೆ ಚಿತ್ರದುರ್ಗ ಮತ್ತು ಹೊಸದುರ್ಗ ನಡುವೆ 64 ರೈ.ಕಿ.ಮೀ. ವಿದ್ಯುದ್ದೀಕರಣ ಮಾಡಲಾಯಿತು.
ವಿಭಾಗೀಯ ವೇಗವನ್ನು 142 ಪಥ ಕಿ.ಮೀ. ಗಳಲ್ಲಿ ಮತ್ತು ಲೂಪ್ ಲೈನ್ ವೇಗವನ್ನು 70 ಪಥ ಕಿ.ಮೀ.ಗಳಲ್ಲಿ ಹೆಚ್ಚಿಸಲಾಗಿದೆ.
2021-22 ರಲ್ಲಿ ರೈಲ್ವೆ ಮೇಲ್ಸೇತುವೆ/ಕೆಳಸೇತುವೆಗಳ ನಿರ್ಮಾಣದ ಮೂಲಕ 08 ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲಾಗಿದೆ.
ವಿಭಾಗದಾದ್ಯಂತ 21 ಶಾಶ್ವತ ವೇಗದ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ.

ವಿಭಾಗವು ಸೌಹಾರ್ದಯುತ ಕೈಗಾರಿಕಾ ಸಂಬಂಧಗಳು ಹೊಂದಿದ್ದು, ಸಂಘಟಿತ ಕಾರ್ಮಿಕ ಸಂಘವು ವಿಭಾಗದಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ರೈಲ್ವೆಯ ವ್ಯವಹಾರದ ಸುಗಮ ಕಾರ್ಯನಿರ್ವಹಣೆಗಾಗಿ ಆಡಳಿತಕ್ಕೆ ಯಾವಾಗಲೂ ರಚನಾತ್ಮಕ ಬೆಂಬಲವನ್ನು ನೀಡುತ್ತಿದೆ.

ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯು ರೈಲ್ವೆ ಸಿಬ್ಬಂದಿಗಳು ಮತ್ತು ಅವರ ಕುಟುಂಬಗಳ ಜೀವನ ಸುಧಾರಣೆಗಾಗಿ ವಿವಿಧ ಸಾಮಾಜಿಕ ಮತ್ತು ಕಲ್ಯಾಣ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಅವರು ನಡೆಸುತ್ತಿರುವ ಲಲಿತಾ ಪ್ರೌಢಶಾಲೆಯು ರೈಲ್ವೆ ನೌಕರರ ಕುಟುಂಬ ವರ್ಗದವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿದೆ.

ಪ್ರಶಸ್ತಿಗೆ ಭಾಜನರಾಗದ ಇತರೆ ನೌಕರರು ಯಾವುದೇ ರೀತಿಯಲ್ಲೂ ಕಡಿಮೆಯಲ್ಲ, ಅವರು ಮುಂದೆ ಹಲವು ಸಾದನೆಗಳನ್ನು ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ  ದೇವಸಹಾಯಂ ಮತ್ತು  ಬುಡತಿ ಶ್ರೀನಿವಾಸುಲು ಮತ್ತು ಮೈಸೂರು ವಿಭಾಗದ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿಯಾದ  ಪ್ರಶಾಂತ್ ಮಾಸ್ತಿಹೊಳಿ ರವರು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: