ಕರ್ನಾಟಕಪ್ರಮುಖ ಸುದ್ದಿ

ಟ್ಯಾಂಕರ್ ಹರಿದು ಬಾಲಕಿ ಸಾವು : ನಿಜವಾದ ಟ್ಯಾಂಕರ್ ಚಾಲಕನ ಬಂಧನ

ರಾಜ್ಯ(ಬೆಂಗಳೂರು),ಮೇ.28 : ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್ ನಲ್ಲಿ ವಾಟರ್ ಟ್ಯಾಂಕರ್ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ಯಾಂಕರ್ ಚಾಲಕ ರಖೀಬ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ದಾಖಲಾಗಿದ್ದ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ವೇಳೆ ಟ್ಯಾಂಕರ್ ಮಾಲೀಕ ಕಳ್ಳಾಟ ನಡೆಸಿದ್ದಾನೆ. ಚಾಲಕನ ಬದಲು ಮಾಲೀಕ ಬೇರೆ ಚಾಲಕನನ್ನ ಠಾಣೆಗೆ ಹಾಜರುಪಡಿಸಿದ್ದಾನೆ. ಈ ಮೂಲಕ ನೀರಿನ ಟ್ಯಾಂಕರ್ ಮಾಲೀಕ ಆನಂದ್ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ.

ಹಣಕೊಟ್ಟು ರಮೇಶ್ ಬಾಬು ಎಂಬಾತನನ್ನು ಪೊಲೀಸರ ಮುಂದೆ ಹಾಜರು ಪಡಿಸಿದ್ದಾನೆ. ಪೊಲೀಸರ ತನಿಖೆ ವೇಳೆ ಅಪಘಾತ ಮಾಡಿದ ಚಾಲಕ ಬೇರೆ ವ್ಯಕ್ತಿ ಎಂಬುದು ಬೆಳಕಿಗೆ ಬಂದಿದ್ದು, ಹಣದಾಸೆಗೆ ಆರೋಪಿಯಂತೆ ಒಪ್ಪಿಕೊಂಡಿರುವುದಾಗಿ ರಮೇಶ್ ಬಾಬು ಹೇಳಿಕೆ ನೀಡಿದ್ದಾನೆ.

ಇದೇ ವೇಳೆ ಅಪಘಾತ ಎಸಗಿದ ಅಸಲಿ ಚಾಲಕ ರಖೀಬ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಬಳಿಕ ರಖೀಬ್ ಪರಾರಿಯಾಗಿದ್ದ. ಇದೀಗ ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಪೊಲೀಸರು ಆರೋಪಿ ಚಾಲಕನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಸಂಚಾರಿ ಪೊಲೀಸರು ಸುಮಾರು 258 ನೀರಿನ ಟ್ಯಾಂಕರ್ ಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ವೇತ ರೆಸಿಡೆನ್ಸಿ ಅಪಾರ್ಟ್‍ಮೆಂಟ್ ಮುಂದೆ ಈ ಅಪಘಾತ ಸಂಭವಿಸಿತ್ತು. ಅಪಾರ್ಟ್‍ಮೆಂಟ್‍ಗೆ ನೀರನ್ನು ಲೋಡ್ ಮಾಡಲು ಟ್ಯಾಂಕರ್ ತರಲಾಗಿತ್ತು. ನೀರು ಲೋಡ್ ಮಾಡಿ ಮುಗಿದ ಬಳಿಕ ಟ್ಯಾಂಕರ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಅವಘಡ ನಡೆದಿದೆ. ಹಿಂದೆ ನೋಡದೆ ಚಾಲಕ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ವಾಹನ ಬಾಲಕಿ ಮೇಲೆ ಹರಿದಿದ್ದು, ಚಕ್ರದಡಿ ಸಿಲುಕಿ ಮೂರು ವರ್ಷದ ಬಾಲಕಿ ಪ್ರತಿಷ್ಠಾ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಹೆಚ್‍ಎಸ್ ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.(ಎಸ್.ಎಂ)

Leave a Reply

comments

Related Articles

error: