ಮೈಸೂರು

ನಗರದ ಹೊರವಲಯದ ವರ್ತುಲ ರಸ್ತೆಯ ಬೀದಿ ದೀಪ ನಿರ್ವಹಣೆಗೆ ಕ್ರಮ ವಹಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಮೇ.28:- ನಗರದ ಹೊರವಲಯದ ವರ್ತುಲ ರಸ್ತೆಯ ಬೀದಿ ದೀಪದ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿ, ಬೀದಿ ದೀಪ ನಿರ್ವಹಣೆಗೆ ಕ್ರಮವಹಿಸುವಂತೆ ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನಗರದ  ಹೊರವಲಯದಲ್ಲಿರುವ ವರತುಲೊ ರಸ್ತೆಯು ನಗರದ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಸಂಪರ್ಕ ಸೇತುವೆಯಾಗಿದೆ. ಇದರ ವ್ಯಾಪ್ತಿಯಲ್ಲಿ ಬರುವ ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ಕೊರತೆಯಿಂದ ದಿನನಿತ್ಯ ಓಡಾಡುವ ಜನರಿಗೆ ನರಕಯಾತನೆಯಾಗಿದೆ. ಈ ಬೀದಿ ದೀಪಗಳಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳಾದ ಚೆಸ್ಕಾಂ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸಮನ್ವಯದ ಕೊರತೆಯಿಂದ ನಾಗರೀಕರು ಪರದಾಡುವಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬಾರಿ ಚೆಸ್ಕಾಂ ಗೆ ದೂರು ಸಲ್ಲಿಸಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ತಿಳಿಸಿ ಎಂದು ಉತ್ತರಿಸುತ್ತಾರೆ. ಈ ಇಲಾಖೆಯಲ್ಲಿ ವಿಚಾರಿಸಿದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ವಿಚಾರಿಸಿ ಎಂಬ ಬೇಜವಾಬ್ದಾರಿ ಉತ್ತರ ಬರುತ್ತದೆ. ಸಂಸದರು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಎಚ್ಚೆತ್ತು ಸಮರ್ಪಕ ಬೀದಿ ದೀಪ ನಿರ್ವಹಣೆಗೆ ಕ್ರಮವಹಿಸಬೇಕು. ಕಗ್ಗತ್ತಲಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಜಿಲ್ಲಾಡಳಿತ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರುಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಕಪಿನಿಗೌಡ, ಬೀಡಾಬಾಬು, ಸಿದ್ದಪ್ಪ, ಸ್ವಾಮಿ ಗೈಡ್, ಕಾವೇರಿಯಮ್ಮ, ಮಾಲಿನಿ, ಸುನಿಲ್, ಮಾದಪ್ಪ, ಅರವಿಂದ, ರಾಧಾಕೃಷ್ಣ, ಮಹದೇವಸ್ವಾಮಿ, ಕಿರಣ್, ಸಚಿನ್, ನಾಗರಾಜು, ಶಂಕರ್ ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: