ಮೈಸೂರು

ಕೋಡಿಹಳ್ಳಿ ಚಂದ್ರಶೇಖರ್ ಅವರ ಭ್ರಷ್ಟತೆ ಖಂಡಿಸಿ, ಅವರ ಎಲ್ಲಾ ಡೀಲ್ ಗಳ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಮೇ.28:- ಹಸಿರು ಟವಲ್ ದುರುಪಯೋಗಪಡಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ಭ್ರಷ್ಟತೆಯನ್ನು ಖಂಡಿಸಿ ಅವರ ಎಲ್ಲಾ ಡೀಲ್ ಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಿದ್ದು, ಮೈಸೂರಿನಲ್ಲಿಯೂ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಕರ್ನಾಟಕ ರಾಜ್ಯ ರೈತ ಚಳುವಳಿ ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ ಹುಟ್ಟಿರುವ ಚಳವಳಿ. ಇದರಲ್ಲಿ ಹಲವಾರು ರೈತ ಚೇತನರು ಪಾಲ್ಗೊಂಡು ಚಳವಳಿ ನಡೆಸಿದ್ದರು. ಇಂತಹ ಪಾವಿತ್ರ್ಯವುಳ್ಳ ಚಳವಳಿಯಲ್ಲಿ ಕೆಲವು ವ್ಯಕ್ತಿಗಳು ನುಸುಳಿಕೊಂಡು ರೈತ ಸ್ವಾಭಿಮಾನದ ಸಂಕೇತವಾದ ಹಸಿರು ಟವಲ್ ಧರಿಸಿ ಸ್ವಾರ್ಥಕ್ಕಾಗಿ ಬಳಸಿಕೊಂಡಿರುವ ಕೆಲವು ಉದಾಹರಣೆಗಳು ಇದ್ದು ಅಂತಹವರನ್ನು ಚಳವಳಿಯು ಕಾಲಕಾಲಕ್ಕೆ ಹೊರಹಾಕುತ್ತಾ ಬಂದಿದೆ. ಅಧಿಕಾರ ನಡೆಸಿರುವ ಮತ್ತು ನಡೆಸುತ್ತಿರುವ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಇಂತಹ ಕೆಲವು ವ್ಯಕ್ತಿಗಳನ್ನು ಬಳಸಿಕೊಂಡಿವೆ. ಚಳುವಳಿಗಳಲ್ಲಿ ಒಡಕು ತರಲು ಪ್ರಯತ್ನ ಪಟ್ಟಿವೆ. ಹಸಿರುಟವಲ್ ಹಾಕಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಚಳುವಳಿ ದೂರ ಇಟ್ಟಿದೆ ಎಂದರು.

ಆದರೆ ಅವರು ಸ್ವಯಂ ಘೋಷಿತವಾಗಿ ಅಧ್ಯಕ್ಷ ಎಂದು ಘೋಷಿಸಿಕೊಂಡು ಪಾವಿತ್ರ್ಯವುಳ್ಳ ಚಳುವಳಿ ಮತ್ತು ಹಸಿರು ಟವಲ್ ನ್ನು ದುರುಪಯೋಗಪಡಿಸಿಕೊಂಡು ಕೆಎಸ್ ಆರ್ ಟಿಸಿ ನೌಕರರ ಚಳುವಳಿ ಮತ್ತು ದೆಹಲಿಯಲ್ಲಿನ ರೈತ ಚಳುವಳಿಯನ್ನು ವಾಪಸ್ ಪಡೆಯಲು ಕಾರ್ಯತಂತ್ರ ರೂಪಿಸುವುದಾಗಿ ಹೇಳಿ ಡೀಲ್ ಹಗರಣದಲ್ಲಿ ಮುಳುಗಿರುವುದನ್ನು ವಾಹಿನಿಯೊಂದು ಸ್ಟಿಂಗ್ ಆಪರೇಷನ್ ಮೂಲಕ ಜಗಜ್ಜಾಹೀರು ಮಾಡಿದೆ. ರೈತ ಚಳುವಳಿಯ ಹೆಸರಿನಲ್ಲಿ ಇಂತಹ ದಳ್ಳಾಳಿಯ ವ್ಯವಹಾರ ನಡೆಸಿರುವುದು ಖಂಡನೀಯ. ರೈತ ಸಮುದಾಯ ಇಂತಹ ವ್ಯವಹಾರವನ್ನು ಸಹಿಸುವುದಿಲ್ಲ ಎಂದು ತಿಳಿಸಿದರು.

ವಾಹಿನಿಯೊಂದರಲ್ಲಿ ಪ್ರಸಾರವಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ವ್ಯವಹಾರ ಹಾಗೂ ಎಲ್ಲಾ ಅಕ್ರಮ ವ್ಯವಹಾರದ ಬಗ್ಗೆ ತನಿಖೆ ನಡೆಸಲು ಸಿಬಿಐ ಅಥವಾ ಹಾಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಹಗರಣದಲ್ಲಿ ಪಾಲುದಾರರಾಗಿರುವ ಕೋಟಿಹಳ್ಳಿ ಚಂದ್ರಶೇಖರ್ ಮತ್ತು ಈ ಹಗರಣಕ್ಕೆ ಸರ್ಕಾರದ ಪರ ಅಥವಾ ಯಾವುದೇ ಪಕ್ಷದ ಪರ ಕುಮ್ಮಕ್ಕು ನೀಡಿರುವವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಎಂ.ಎಸ್.ಅಶ್ವತ್ಥನಾರಾಯಣ್ ರಾಜೇ ಅರಸ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ರಾಜ್ಯ ಮುಖಂಡ ಬನ್ನೂರು ಕೃಷ್ಣಪ್ಪ, ಜಿಲ್ಲಾ ಮಹಿಳಾ ಅಧ್ಯಕ್ಷೆ ನೇತ್ರಾವತಿ, ಜಿಲ್ಲಾ ಖಜಾಂಚಿ ಕೆ.ಕೆಂಪೇಗೌಡ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: