
ಮೈಸೂರು
ಮನೆ ಮನೆಯಲ್ಲಿ ಯೋಗ ಶೀರ್ಷಿಕೆ ಅಡಿಯಲ್ಲಿ ಪೂರ್ವ ತಯಾರಿ
ಮೈಸೂರು, ಮೇ.29:- ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕಳೆದ ಭಾನುವಾರದಿಂದ ತಯಾರಿ ನಡೆಯುತ್ತಿದ್ದು ಇಂದು ಜೆ.ಎಸ್.ಎಸ್ ಮಠದ ಆವರಣದಲ್ಲಿ ಮನೆ ಮನೆ ಯಲ್ಲಿ ಯೋಗ ಎಂಬ ಶೀರ್ಷಿಕೆ ಅಡಿಯಲ್ಲಿ ಪೂರ್ವ ತಯಾರಿ ಕಾರ್ಯಕ್ರಮವು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಸ್.ಎ.ರಾಮದಾಸ್ ಅವರು
ಕಳೆದ ಭಾನುವಾರದಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ತಯಾರಿ ನಡೆಸುತ್ತಿದ್ದೇವೆ, ಐದು ವರ್ಷಗಳ ನಿರಂತರವಾದ ತಪಸ್ಸು ಈಗ ಫಲಿಸಿದೆ, ಮನೆ ಮನೆಗೆ ಯೋಗ ಎಂಬ ವಿಚಾರವನ್ನು ಇಡೀ ದೇಶಕ್ಕೆ ನೀಡಿದ್ದು ಮೈಸೂರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಾಗ ಯೋಗ, ಪ್ರವಾಸೋದ್ಯಮ, ಆರೋಗ್ಯ ದ ದೃಷ್ಟಿಯಿಂದ ಇಡೀ ಭೂಪಟದಲ್ಲಿ ತಂದು ನಿಲ್ಲಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಘೋಷಣೆಯನ್ನ ಮಾಡಿದ್ದರು. ಅದರ ಸಲುವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿಗಳು ಬರುತ್ತಿದ್ದಾರೆ ಎಂದರೆ ಅದು ಹೆಮ್ಮೆಯ ವಿಷಯವೇ ಸರಿ.
ಇನ್ನುಳಿದ 22 ದಿನಗಳಲ್ಲಿ ನಾವು ಪ್ರತಿಯೊಂದು ಮನೆಯಲ್ಲಿ ಯೋಗವನ್ನು ತಲುಪಿಸುವ ಕೈಂಕರ್ಯವನ್ನು ಮಾಡುತ್ತಾ ಮೋದಿಯವರು ಬಂದ ನಂತರದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಸಹ ಓರ್ವ ಯೋಗ ಪಟು ತಯಾರಾಗಿದ್ದಾನೆ ಎಂಬ ಸಂದೇಶ ನೀಡಬೇಕಿದೆ. ಮುಂದಿನ ವಾರ ಮೈಸೂರು ಅರಮನೆ ಮುಂದೆ ಯೋಗದ ರಿಹರ್ಸಲ್ ಇರುತ್ತದೆ. ಸುಮಾರು 30 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಈ ಬಾರಿ ಯೋಗ ದಿನಕ್ಕೆ 2 ಲಕ್ಷ ಜನವನ್ನು ಸೇರಿಸುವ ಗುರಿ ಇದೆ, ಮೈಸೂರಿನ ಮನೆ ಮನೆಯಲ್ಲಿ, ಪಾರ್ಕ್ ಗಳಲ್ಲಿ, ರಸ್ತೆಗಳಲ್ಲಿ ಯೋಗ ಎನ್ನುವ ಒಂದು ಚಿಂತನೆಯನ್ನು ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಎಸ್.ಎಸ್. ಸಂಸ್ಥೆಯ ಶ್ರೀಹರಿ, ಡಾ.ಗಣೇಶ್, ಡಾ. ಸಿ.ಜಿ.ಬೆಟಸೂರು ಮಠ ಸೇರಿದಂತೆ ಪ್ರಮುಖರು ಹಾಜರಿದ್ದರು. (ಜಿ.ಕೆ,ಎಸ್.ಎಚ್)