ಕರ್ನಾಟಕಮೈಸೂರು

ದಸರಾ ನೋಡಲು ಕೈಲಾಸದಿಂದಿಳಿದ ಶಿವ, ಪಾರ್ವತಿ ಗಣೇಶ

ಮೈಸೂರು: ಜಗತ್‍ ಪ್ರಸಿದ್ಧ ಮೈಸೂರು ದಸರಾ ನೋಡಲು ಕೈಲಾಸವಾಸಿಯಾದ ಶಿವನೇ ಪಾರ್ವತಿ, ಗಣೇಶನ ಸಮೇತನಾಗಿ ಮೈಸೂರಿಗೆ ಬಂದಿದ್ದ. ರಾಮ ಲಕ್ಷ್ಮಣ, ಸೀತೆ, ಶಾಂತಿಪ್ರಿಯ ಗಾಂಧೀಜಿ ಎಲ್ಲರೂ ಸಾಂಸ್ಕೃತಿಕ ನಗರಿಯ ಸೊಬಗಿಗೆ ಮನಸೋತು ನಾಡಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಅರೇ, ಕೈಲಾಸವಾಸಿಗಳೆಲ್ಲರೂ ದಸರಾದಲ್ಲಿ ಪಾಲ್ಗೊಳ್ಳಲು ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ. ದಸರಾ ಮಹೋತ್ಸವ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಿದ್ದ ಚಿಣ್ಣರ ದಸರಾದಲ್ಲಿ ಕಂಡು ಬಂದ ದೃಶ್ಯಗಳಿವು.

chinnara-mela-1

ತಾಲೂಕಿನ ವಿವಿಧ ಶಾಲೆ, ಅಂಗನವಾಡಿ ಮಕ್ಕಳು ವೈವಿಧ್ಯಮಯ ವೇಶಭೂಷಣಗಳನ್ನು ಧರಿಸಿ ಮೊದಲ ಬಾರಿಗೆ ಆಯೋಜಿಸಿರುವ ಚಿಣ್ಣರ ದಸರಾಗೆ ಮೆರುಗು ನೀಡಿದರು. ಮೈದಾನದ ತುಂಬೆಲ್ಲಾ ಚಿಣ್ಣರ ಕಲರವವೇ ತುಂಬಿತ್ತು. ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ, ಕಪ್ಪು ದ್ರಾಕ್ಷಿ, ಭಾರತಾಂಬೆ ಸೇರಿದಂತೆ ಬಗೆ ಬಗೆಯ ಧಿರಿಸಿನಲ್ಲಿದ್ದ ಮಕ್ಕಳು ಎಲ್ಲರ ಗಮನ ಸೆಳೆದರು.

ಅಚಿಂತ್ಯನಿಗೆ ಮುತ್ತುಗಳ ಸುರಿಮಳೆ: ಡ್ರಾಮಾ ಜೂನಿಯರ್ಸ್ ಮೂಲಕ ಎಲ್ಲರ ಮನೆ ಮಾತಾಗಿರುವ ಪುಟಾಣಿ ಅಚಿಂತ್ಯ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ. ಮೈದಾನಕ್ಕೆ ಆಗಮಿಸುತ್ತಿದ್ದಂತೆ ಎಲ್ಲರೂ ಆತನನ್ನು ಅಪ್ಪಿಕೊಂಡು ಮುದ್ದಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ವೇದಿಕೆಯ ಮೇಲೆ ಆತನ ತುಂತಾಟ, ತರಲೆ ನೋಡಿ ನಗೆಗಡಲಲ್ಲಿ ತೇಲಾಡಿದರು. ಸಚಿವ ತನ್ವೀರ್‌ಸೇಠ್ ಅವರಿಗೆ ಗನ್ ತೋರಿಸಿ ಬೆಚ್ಚಿಬೀಳಿಸಿದ. ಅಚಿಂತ್ಯನ ತುಂಟಾಟಕ್ಕೆ ಸ್ವತಃ ಸಚಿವರೇ ಮಾರು ಹೋದರು. ಈತನೊಂದಿಗೆ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹೇಂದ್ರ, ಅಮೋಘ, ಕಿನ್ನರಿ ಖ್ಯಾತಿಯ ದಿಶಾ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಕಾರ್ಯಕ್ರಮದಲ್ಲಿ ಮಹಿಳಾ ಹಾಗೂ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

 

“ನಿತ್ಯ ಬದುಕಿನ ಜಂಟಾಟದಲ್ಲಿ, ಸಮಸ್ಯೆಗಳ ನಡುವೆ ಒದ್ದಾಡುವ ನಮಗೆ ಮಕ್ಕಳ ತುಂಟಾಟ, ಅವರ ನಗು ಕೊಂಚ ನೆಮ್ಮದಿ ನೀಡುತ್ತದೆ. ಅವರಿಂದ ಸಹನೆ, ತಾಳ್ಮೆ, ಮುಗ್ದತೆ ಕಲಿಯುತ್ತೇವೆ. ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿ ಎತ್ತರಕ್ಕೆ ಬೆಳೆಸುವ ದೊಡ್ಡ ಜವಾಬ್ದಾರಿ ಪೋಷಕರ ಮೇಲಿದ್ದು ಮಕ್ಳಳ ಕನಸನ್ನು ನನಸು ಮಾಡುವತ್ತ ಹೆಜ್ಜೆಯಿಡಬೇಕು. ಇದು ಒಬ್ಬರಿಂದಾಗದ ಕೆಲಸವಾಗಿದ್ದು ಸರ್ಕಾರ ಉತ್ತಮ ಶಿಕ್ಷಣ ನೀಡುವತ್ತ ಗಮನಹರಿಸುತ್ತಿದೆ. ದೇಶದ ಉಜ್ವಲ ಭವಿಷ್ಯ ಮಕ್ಕಳ ಕೈಯಲ್ಲಿರುವುದರಿಂದ ದೇಶದ ಸಂಸ್ಕೃತಿ, ಪರಂಪರೆ, ಇತಿಹಾಸ ಎಲ್ಲವನ್ನೂ ತಿಳಿಸಿ ಸಮಾಜದ ಉನ್ನತಿಗೆ ಕಾರಣವಾಗಬೇಕು”

-ತನ್ವೀರ್‌ಸೇಠ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ.

chinnara-mela-3

 

 

Leave a Reply

comments

Related Articles

error: