ಮೈಸೂರು

ಜಗತ್ತಿನಲ್ಲಿ ತಾಯಿಯೇ ಸರ್ವ ಶ್ರೇಷ್ಠ: ಬನ್ನೂರು ರಾಜು

ಮೈಸೂರು, ಮೇ ೧೪: ಜಗತ್ತಿನಲ್ಲಿ ತಾಯಿಯೇ ಸರ್ವ ಶ್ರೇಷ್ಠ. ತಾಯಿಗಿಂತ ಮಿಗಿಲಾದುದು ಬೇರೆ ಯಾವುದೂ ಇಲ್ಲ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಭಾನುವಾರ ಮೈಸೂರು ಕನ್ನಡ ವೇದಿಕೆ ವತಿಯಿಂದ ಭಾರತಿ ವೃದ್ಧಾಶ್ರಮದಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಪ್ರತಿದಿನ ನೂರಾರು ಜಯಂತಿಗಳನ್ನು ಆಚರಿಸಲಾಗುತ್ತಿದೆ. ಆದರೆ ತಾಯಿಂದಿರ ದಿನಾಚರಣೆಗೆ ಇರುವ ಮಹತ್ವ ಬೇರೆ ಯಾವ ಜಯಂತಿಗಳಿಗೂ ಇಲ್ಲ. ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಎಲ್ಲಿಯೂ ಇರುವುದಿಲ್ಲ. ತಾಯಂದಿರ ದಿನಾಚರಣೆ ಸಂದರ್ಭದಲ್ಲಿ ಮಕ್ಕಳು ತಾಯಿಯ ಪ್ರೀತಿಯನ್ನು ಅರಿತು ಅವರನ್ನು ವಾತ್ಸಲ್ಯದಿಂದ ನೋಡಿಕೊಳ್ಳಬೇಕಿದೆ. ಜನ್ಮಕೊಟ್ಟ ತಾಯಿಯಂತೆ ಮಾತೃಭೂಮಿಯೂ ತಾಯಿಯೇ ಆಗಿದ್ದು, ಈ ಇಬ್ಬರು ತಾಯಂದಿರಿಗೆ ವಿಧೇಯನಾಗಿ ನಡೆದುಕೊಳ್ಳಬೇಕಿದೆ. ಎಂದೂ ತೀರಿಸಲಾಗದ ತಾಯಿಯ ಋಣವನ್ನು ತೀರಿಸುವ ಪ್ರಯತ್ನವನ್ನು ಮಕ್ಕಳು ಮಾಡಬೇಕು. ಇರುವ ತನಕ ಸುಖ, ಶಾಂತಿಯೊಂದಿಗೆ ನೆಮ್ಮದಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಆಶ್ರಮದ ತಾಯಂದಿರಿಗೆ ಹಣ್ಣು ಹಂಪಲು, ಬ್ರೆಡ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನ್ಯಾಯವಾದಿ ಆರ್.ಡಿ.ಕುಮಾರ್, ಕಾಂಗ್ರೆಸ್ ಮುಖಂಡ ರೇವಣ್ಣ, ಪತ್ರಕರ್ತ ಮಧುಕುಮಾರ್, ರಾಧಾಕೃಷ್ಣ, ಕುರುಬಾರಹಳ್ಳಿ ಧನಪಾಲ್, ಶಶಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: