ಮೈಸೂರು

ನಗರದ ವಿವಿಧೆಡೆ ಸಂಭ್ರಮದ ಗಾಂಧಿ ಜಯಂತಿ ಆಚರಣೆ

ಮಹಾತ್ಮ ಗಾಂಧಿ ಜನ್ಮದಿನವಾದ ಭಾನುವಾರದಂದು ನಗರದ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ರಾಷ್ಟ್ರಪಿತರಿಗೆ ಗೌರವ ಸಲ್ಲಿಸಲಾಯಿತು.

ಗಾಂಧಿ ಪ್ರತಿಮೆ ಬಳಿ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಹಾತ್ಮ ಗಾಂಧಿಗೆ ಮಾಲಾರ್ಪಣೆ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಿದರು. ಈ ಸಂದರ್ಭ ಗಾಂಧೀಜಿ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಅವರು, ಪ್ರತಿಯೊಬ್ಬರೂ ಗಾಂಧಿ ತತ್ತ್ವಗಳನ್ನು ಅನುಸರಿಸುವ ಅಗತ್ಯವಿದೆ ಎಂದರು.

ಮೈಸೂರು ವಿಶ್ವವದ್ಯಾನಿಲಯದ ಗಾಂಧಿ ಭವನದಲ್ಲಿ ಆಯೋಜಿಸಲಾದ ಗಾಂಧೀಜಿಯವರ 148ನೇ ಜನ್ಮದಿನೋತ್ಸವವನ್ನು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಉದ್ಘಾಟಿಸಿದರು. ಗಾಂಧಿವಾದಿ ಸುರೇಂದ್ರ ಕೌಲಗಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಗಾಂಧಿ ತುಂಬಾ ವಿಭಿನ್ನ ಮಾರ್ಗ ಬಳಸಿದ್ದರು. ಅಸಕಾರ ಮತ್ತು ಅಹಿಂಸೆಯನ್ನು ಭೋದಿಸಿದ್ದರು ಮತ್ತು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ದೀನರ ಅಭ್ಯುದಯ, ಮಹಿಳಾ ಹಕ್ಕುಗಳ ವಿಸ್ತರಣೆ, ಜನಾಂಗೀಯ, ಧರ್ಮ ಸೌಹಾರ್ದ ನಿರ್ಮಿಸಲು ಮತ್ತು ಅಸ್ಪೃಶ್ಯತೆ ನಿವಾರಣೆಗೆ ಆಂದೋಲನಗಳನ್ನು ರೂಪಿಸಿದ್ದರು. ಗಾಂಧೀಜಿಯವರು ಜೀವನದಲ್ಲಿ ಸಾಧಿಸಿದ್ದು ಒಂದು ಪವಾಡ ಎಂದೇ ಹೇಳಬಹುದು. ಭಾರತದ ಮಿಲಿಯನ್‍ಗೂ ಹೆಚ್ಚು ಜನರ ಹೃದಯದಲ್ಲಿ ಅವರು ನೆಲೆಸಿದ್ದಾರೆ ಎಂದು ಹೇಳಿದರು.

ಇನ್ನೊಂದು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಿ.ಶಿವಲಿಂಗಪ್ಪ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಡಾ.ಎಚ್.ಆರ್. ಪವಿತ್ರಾ ಮಹಾತ್ಮಾ ಗಾಂಧಿ ಅವರ ಸ್ವಾತಂತ್ರ್ಯ ಹೋರಾಟ ಮತ್ತು ಅಹಿಂಸೆ ಬಗೆಗಿನ ನಿಲುವುಗಳ ಬಗ್ಗೆ ತಿಳಿಸಿದರು.

ಅರಸು ಚಿಂತಕರ ಚಾವಡಿಯು ಭಾನುವಾರ ಬೆಳಗ್ಗೆ ಗಾಂಧಿ ಜಯಂತಿ ಪ್ರಯುಕ್ತ ಪರಂಪರೆ ನಡಿಗೆ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಚಾವಡಿಯ ಸದಸ್ಯರು ಮೈಸೂರು ಅರಮನೆ ಆವರಣದಿಂದ ಜಿಲ್ಲಾ ಕೋರ್ಟ್ ಬಳಿಯಿರುವ ಗಾಂಧಿ ಪ್ರತಿಮೆವರೆಗೆ ರ್ಯಾಲಿ ನಡೆಸಿದರು.

 

Leave a Reply

comments

Related Articles

error: