ಮೈಸೂರು

ಸರ್ಕಾರದಿಂದ ಸಹಾಯ ಕೊಡಿಸುವುದಾಗಿ ನಂಬಿಸಿ ಚಿನ್ನಾಭರಣ ದೋಚಿ ಪರಾರಿ

ಮೈಸೂರು, ಮೇ.14:- ಸರ್ಕಾರದಿಂದ ಸಹಾಯ ಕೊಡಿಸುವುದಾಗಿ ನಂಬಿಸಿ ವೃದ್ಧೆಯೋರ್ವರಿಂದ  20 ಗ್ರಾಂ ತೂಕದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ  ಮೈಸೂರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಿನ್ನಾಭರಣ ಕಳೆದುಕೊಂಡ ವೃದ್ಧೆಯನ್ನು ಗುಂಡ್ಲು ಪೇಟೆಯ ಮಾದಮ್ಮ(70) ಎಂದು ಹೇಳಲಾಗಿದೆ. ಇವರು ಮೈಸೂರಿನ  ಲಕ್ಷ್ಮೀ ಕಾಂತ ನಗರದ  ಮನೆಗೆ ತೆರಳಲು ಗುಂಡ್ಲುಪೇಟೆಯಿಂದ ಬಂದಿದ್ದರು. ಗ್ರಾಮಾಂತರ ಬಸ್ ನಿಲ್ದಾಣದಿಂದ ಹೊರಗೆ ಬರುತ್ತಿದ್ದ ವೇಳೆ  ಸುಮಾರು 40 ವರ್ಷದ ವ್ಯಕ್ತಿಯೋರ್ವನ ಪರಿಚಯವಾಯಿತು.  ಆತ ನನ್ನ ಮನೆ ನಿಮ್ಮ ಮಗಳ ಮನೆ ಹತ್ತಿರವೇ ಇರುವುದು ಎಂದು ಅವರನ್ನು ನಂಬಿಸಿದ್ದಾನೆ. ನಿಮಗೆ ಸರ್ಕಾರದಿಂದ ನೆರವು ಕೊಡಿಸುವುದಾಗಿ ಹೇಳಿ ಕೆ.ಆರ್. ಆಸ್ಪತ್ರೆ ಬಳಿ ಇಳಿದು ಚೆಲುವಾಂಬ ಆಸ್ಪತ್ರೆಗೆ  ಕರೆದೊಯ್ದಿದ್ದಾನೆ ಎನ್ನಲಾಗಿದೆ. ನಿಮ್ಮ ಮೈಮೇಲೆ ಚಿನ್ನಾಭರಣವಿದ್ದರೆ ನೆರವು ಸಿಗುವುದಿಲ್ಲ ಎಂದು ಹೇಳಿ ಮಾದಮ್ಮ ಅವರ ಕತ್ತಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ಮತ್ತು 4 ಗ್ರಾಂ ತೂಕದ ಚಿನ್ನದ ಓಲೆಯನ್ನು ಬಿಚ್ಚಿಸಿ ಬ್ಯಾಗ್ ನಲ್ಲಿರಿಸಿಕೊಂಡಿದ್ದ. ಬಳಿಕ ಟೀ  ಅಂಗಡಿಯಲ್ಲಿ  ಬ್ಯಾಗ್ ಇರಿಸಿ  ಮಾದಮ್ಮ  ಅವರನ್ನು ಮಕ್ಕಳ ವಾರ್ಡ್ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಅವರು ಆಚೀಚೆ ನೋಡುವಷ್ಟರಲ್ಲಿ ಟೀ ಅಂಗಡಿಯಲ್ಲಿ ಇದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ದೇವರಾಜ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: