ಮೈಸೂರು

ಪ್ಲೆಕ್ಸ್ ಮುಕ್ತ ನಗರದಲ್ಲಿ ರಾರಾಜಿಸುತ್ತಿದೆ ಪ್ಲೆಕ್ಸ್ : ಕಣ್ಣಿದ್ದರೂ ಕುರುಡರಾಗಿರುವ ಅಧಿಕಾರಿಗಳು

ಮೈಸೂರು, ಮೇ.15:- ಮೈಸೂರು ಕಳೆದೆರಡು ವರ್ಷಗಳಲ್ಲಿ ಸ್ವಚ್ಛ ನಗರಿ ಎಂದು ಗುರುತಿಸಿಕೊಂಡಿತ್ತು. ದೇಶಾದ್ಯಂತದ ಗಮನ ಸೆಳೆದಿತ್ತು. ಆದರೆ ಈ ಬಾರಿ ಸ್ವಚ್ಛ ನಗರಿಯ ಕನಸು ಭಗ್ನಗೊಂಡಿದೆ. ಸ್ವಚ್ಛನಗರಿಗಾಗಿ ಎಷ್ಟೇ ಪ್ರಯತ್ನಿಸಿದರೂ ಎಲ್ಲೋ ಎಡವುತ್ತಿದೆಯೇನೋ ಅನ್ನಿಸುತ್ತಿದೆ. ಪ್ಲೆಕ್ಸ್ ಮುಕ್ತ ನಗರದಲ್ಲಿ ಪ್ಲೆಕ್ಸ್ ರಾರಾಜಿಸುತ್ತಿದೆ.

ಮಹಾನಗರಪಾಲಿಕೆಯ ಮಾಜಿ ಮೇಯರ್ ಭೈರಪ್ಪ ಅವರು ಅಧಿಕಾರದಲ್ಲಿರುವಾಗಲೇ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಪ್ಲೆಕ್ಸ್ ಗಳನ್ನು ಅಳವಡಿಸಬಾರದು ಎಂದು ತಿಳಿಸಿದ್ದರು. ಅಷ್ಟೇ ಅಲ್ಲ ಪ್ಲೆಕ್ಸ್ ಮುಕ್ತ ನಗರವಾಗಿ ಮಾಡಬೇಕೆಂದು ಪಣತೊಟ್ಟು ಅವುಗಳನ್ನು ಕಾರ್ಯರೂಪಕ್ಕೆ ತಂದಿದ್ದು. ಪ್ಲೆಕ್ಸ್ ಗಳು ಕಂಡು ಬಂದಲ್ಲಿ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಇಂದಿನ ಮೇಯರ್ ಎಂ.ಜೆ.ರವಿಕುಮಾರ ಈ ಕುರಿತು ಗಮನ ಹರಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಇದಕ್ಕೆ ತಾಜಾ ಉದಾಹರಣೆ ಮೇ.10ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ರಾಮವಿಲಾಸ ರಸ್ತೆಯಲ್ಲಿ ಶಾಸಕ ಸಾ.ರಾ.ಮಹೇಶ್ ಅವರ ಕಚೇರಿ ಉದ್ಘಾಟನೆ ನಡೆಸಿದ್ದರು. ಆ ಪ್ರಯುಕ್ತ ರಾಮವಿಲಾಸ ರಸ್ತೆಯಲ್ಲಿ ರಾಷ್ಟ್ರೀಯ ಪತ್ರಿಕೆಗಳ ಕಚೇರಿಗಳಿರುವ ಸಂಕೀರ್ಣವೊಂದರ ಮುಂದಿನ ವಿದ್ಯುತ್ ಕಂಬಕ್ಕೆ ಕುಮಾರಸ್ವಾಮಿ ಸೇರಿದಂತೆ ಮೇಯರ್ ಹಾಗೂ ಜೆಡಿಎಸ್ ಪ್ರಮುಖರ ಭಾವಚಿತ್ರವಿರುವ ಪ್ಲೆಕ್ಸ್ ಒಂದನ್ನು ಅಳವಡಿಸಲಾಗಿತ್ತು. ಕಾರ್ಯಕ್ರಮ ಮುಗಿದು ಒಂದು ವಾರ ಸಮೀಪಿಸುತ್ತಿದ್ದರೂ ಇನ್ನೂ ಪ್ಲೆಕ್ಸ್ ನ್ನು ತೆರವುಗೊಳಿಸಲಾಗಿಲ್ಲ. ಮುಡಾ ಕಚೇರಿ ಮಾರ್ಗವಾಗಿ ಬರುವ ಪಾಲಿಕೆಯ ಆಯುಕ್ತ ಜೆ.ಜಗದೀಶ್ ಅವರ ಕಣ್ಣಿಗೂ ಈ ಪ್ಲೆಕ್ಸ್ ಕಾಣಿಸಿಲ್ಲವಾ? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.   ಇದೇ ರೀತಿ ನಿರ್ಲಕ್ಷ್ಯವಹಿಸಿದರೆ ಮತ್ತೆ ನಗರದಲ್ಲಿ ಪ್ಲೆಕ್ಸ್ ಹಾವಳಿ ನಡೆಯಲಿದೆ.  ಮೇಯರ್ ಎಂ.ಜೆ.ರವಿಕುಮಾರ ಸ್ವಚ್ಛನಗರಿ ಪಟ್ಟ ತಪ್ಪಲು ಕಾರಣವೇನು ಎನ್ನುವುದನ್ನು ಈಗಲಾದರೂ ಯೋಚಿಸಿದರೆ ಒಳ್ಳೆಯದು. ಪ್ಲೆಕ್ಸ್ ಮುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಪ್ಲೆಕ್ಸ್ ಗಳು ರಾರಾಜಿಸುವುದು ಎಷ್ಟು ಸರಿ ಈ ಕುರಿತು ಯೋಚಿಸುವುದು ಒಳ್ಳೆಯದು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: