ದೇಶಪ್ರಮುಖ ಸುದ್ದಿವಿದೇಶ

ಜಿಹಾದ್ ಸೋಗಿನಲ್ಲಿ ಹಫೀಜ್ ಸಯೀದ್ ಉಗ್ರವಾದ ಹರಡುತ್ತಿದ್ದಾನೆ : ಪಾಕಿಸ್ತಾನ ಗೃಹಸಚಿವಾಲಯ ವರದಿ!

ದೇಶ-ವಿದೇಶ (ಪ್ರಮುಖ ಸುದ್ದಿ) ಲಾಹೋರ್, ಮೇ 15 : ಜಿಹಾದ್ ಹೆಸರಲ್ಲಿ ಜಮಾದ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಉಗ್ರವಾದ ಹರಡುತ್ತಿದ್ದಾನೆ ಎಂದು ಪಾಕಿಸ್ತಾನ ಗೃಹಸಚಿವಾಲಯವು ಕಾನೂನು ಪರಾಮರ್ಶೆ ಮಂಡಳಿಗೆ ವರದಿ ನೀಡಿದೆ.

ಸದ್ಯ ಹಫೀಜ್ ಮತ್ತು ಆತನ ನಾಲ್ವರು ಸಹಚರರಾದ ಜಾಫರ್ ಇಕ್ಬಾಲ್, ರೆಹ್ಮಾನ್ ಅಬಿಡ್, ಅಬ್ದುಲ್ಲಾ ಉಬೈದ್, ಮತ್ತು ಕಾಜಿ ಕಾಶಿಫ್ ನಿಯಾಜ್ ಗೃಹಬಂಧನಲ್ಲಿದ್ದಾರೆ. ಅಲ್ಲಿನ ಪಂಜಾಬ್ ಸರಕಾರ ಗೃಹಬಂಧನಕ್ಕೆ ಒಳಪಡಿಸಿದ್ದರ ವಿರುದ್ಧ ಆತ ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಸುಪ್ರೀಂಕೋರ್ಟ್ ನ್ಯಾ. ಇಜಾಜ್ ಅಫ್ಜಲ್ ಖಾನ್ ನೇತೃತ್ವದಲ್ಲಿ ನ್ಯಾಯ ಮಂಡಳಿ ರಚಿಸಲಾಗಿದೆ.

ನ್ಯಾಯ ಮಂಡಳಿ ಎದುರು ಶನಿವಾರ ಹಾಜರಾಗಿದ್ದ ಹಫೀಜ್ ಸಯೀದ್, ಕಾಶ್ಮೀರ ವಿಚಾರದಲ್ಲಿ ತಾನು ದನಿ ಎತ್ತಿದ್ದಕ್ಕಾಗಿ ಪಾಕ್ ಸರಕಾರ ತನ್ನನ್ನು ಗೃಹಬಂಧನಕ್ಕೆ ಒಳಪಡಿಸಿದೆ ಎಂದು ಹೇಳಿಕೆ ನೀಡಿದ್ದ. ಆದರೆ ಆತನ ವಾದವನ್ನು ಪಾಕ್ ಗೃಹ ಸಚಿವಾಲಯ ತಿರಸ್ಕರಿಸಿದ್ದು, ಹಫೀಜ್ ಮತ್ತು ಆತನ ನಾಲ್ವರು ಸಹಚರರು ಜೆಹಾದ್ ಹೆಸರಲ್ಲಿ ಭಯೋತ್ಪಾದನೆ ಹರಡುತ್ತಿದ್ದಾರೆ ಎಂದು ಹೇಳಿದೆ. ಮುಂದಿನ ವಿಚಾರಣೆ ಮೇ 15ರಂದು ನಿಗದಿಯಾಗಿದ್ದು, ಪಾಕಿಸ್ತಾನ ಅಟಾರ್ನಿ ಜನರಲ್ ಅವರನ್ನು ಹಾಜರಾಗುವಂತೆ ಸೂಚಿಸಲಾಗಿದೆ.

ಭಾರತದ ವಿರುದ್ಧ ಭಯೋತ್ಪಾದನೆ ನಡೆಸಲು ಹಫೀಜ್‍ನನ್ನು ಬಳಸಿಕೊಂಡ ಪಾಕಿಸ್ತಾನ ಸರ್ಕಾರ ಇದುವರೆಗೂ ಆತನ ರಕ್ಷಣೆಗೆ ನಿಂತಿತ್ತು. ಆತನನ್ನು ಉಗ್ರರ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಚೀನಾ ಕೂಡ ಪಾಕಿಸ್ತಾನದ ಪರವಾಗಿ ನಿಂತಿತ್ತು. ಆದರೆ ಇದೀಗ ಹಫೀಜ್ ವಿರುದ್ಧ ವರದಿ ನೀಡಿರುವುದು ಅಚ್ಚರಿ ಮೂಡಿಸಿದೆ.

ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ ಒತ್ತಡದ ಮೇರೆಗೆ ಪಾಕ್ ಸರಕಾರ ಸಯೀದ್ನನ್ನು ಗೃಹಬಂಧನದಲ್ಲಿ ಇಟ್ಟಿದೆ ಎಂದು ಅಲ್ಲಿನ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕ – ಚೀನಾ ಒತ್ತಡ ಕಾರಣ ?

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿದ ನಂತರದಲ್ಲಿ ಅಮೆರಿಕ ಮತ್ತು ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಹಫೀಜ್ ಸಯೀದ್‍ನನ್ನು ಗೃಹಬಂಧನದಲ್ಲಿ ಇರಿಸಿದೆ.

ಇದೀಗ ಚೀನಾದೊಂದಿಗೆ “ಒನ್‍ಬೆಲ್ಟ್-ಒನ್‍-ರೋಡ್” ಯೋಜನೆ ಅಡಿಯಲ್ಲಿ “ಚೀನಾ-ಪಾಕಿಸ್ತಾನ-ಇಕನಾಮಿಕ್-ಕಾರಿಡಾರ್” ಯೋಜನೆಗೆ ಭಾರತ ಅಡ್ಡಿಪಡಿಸಬಹುದು ಎಂಬ ಆತಂಕದಲ್ಲಿರುವ ಪಾಕಿಸ್ತಾನವು, ಹಫೀಜ್ ಸಯೀದ್‍ ಮೇಲೆ ಆರೋಪ ಹೊರಿಸಿ ಕೈತೊಳೆದುಕೊಳ್ಳುವ ನಿರ್ಧಾರಕ್ಕೆ ಬಂದಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

– ಎನ್.ಬಿ.ಎನ್.

Leave a Reply

comments

Related Articles

error: