ಕರ್ನಾಟಕಪ್ರಮುಖ ಸುದ್ದಿ

ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಮಾನಸಿಕ ಅಸ್ವಸ್ಥ ಆರೋಪಿಯನ್ನು ಪ್ರಕರಣದಿಂದ ವಜಾಗೊಳಿಸಿದ ನ್ಯಾಯಾಲಯ

ಪ್ರಮುಖಸುದ್ದಿ, ರಾಜ್ಯ,(ಮಂಗಳೂರು) ಮೇ.15:– ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಮಾನಸಿಕ ಅಸ್ವಸ್ಥ ಆರೋಪಿಯನ್ನು ನ್ಯಾಯಾಲಯವು ಪ್ರಕರಣದಿಂದ ವಜಾಗೊಳಿಸಿ ಆತನಿಗೆ ಪುನರ್ವಸತಿ ಕಲ್ಪಿಸಿದ ಘಟನೆ  ಮಂಗಳೂರಿನಲ್ಲಿ ನಡೆದಿದೆ.

ಮಾನವೀಯತೆ ತೋರಿದ ನ್ಯಾಯಾಲಯದಿಂದ ಆರೋಪಿ  ತನ್ನ ಕುಟುಂಬವನ್ನು ಸೇರುವಂತಾಗಿದೆ.  ಆತ  ಛತ್ತೀಸ್‌ಗಡದ ನಕ್ಸಲ್‌ಪೀಡಿತ ಪ್ರದೇಶಕ್ಕೆ ಹತ್ತಿರ ಇರುವ ಕಾಂಕೇರ್ ಜಿಲ್ಲೆಯ ಭಾನುಪ್ರತಾಪ್ಪುರ್ ತಾಲೂಕಿನ ಕೊಡೆಕುಸರ್‌ ಗ್ರಾಮದ ನಿವಾಸಿ ಜವಾಹರ್‌ಲಾಲ್‌ ಬೋಗ ಹೀಗೆಂದು ಹೇಳಿದವರು  ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೋರ್ ವೆಲ್ ಕೆಲಸಕ್ಕೆ ಮೂಡಬಿದ್ರೆಗೆ 2014ರಲ್ಲಿ ಬಂದ ಬೋಗ ಅಲ್ಲಿಗೆ ಸಮೀಪದ ಪಡುಕೋಣಾಜೆಯ ಸಂಜೀವ್ ಪೂಜಾರಿ ಎಂಬವರ ಬಳಿ ಕುಡಿಯಲು ನೀರು ಕೇಳಿದ್ದ. ಅವರು ಕೊಡಲು ನಿರಾಕರಿಸಿದಾಗ ಅವರನ್ನು ಹೊಡೆದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಪ್ರಕರಣ ಸಂಬಂಧ ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಲಯದ ವಶಕ್ಕೊಪ್ಪಿಸಿದ್ದರು. ಆತನ ನಡವಳಿಕೆಯನ್ನು ಗಮನಿಸಿದ ನ್ಯಾಯಾಲಯ ಆತನ ಮಾನಸಿಕ ಸ್ಥಿತಿಯ ಕುರಿತು ವರದಿ ನೀಡುವಂತೆ ಕೇಳಿದ್ದರು. ಅಧಿಕಾರಿಗಳು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಆರೋಪಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟ ಮೇರೆಗೆ ನ್ಯಾಯಾಲಯವು ಜವಹರ್‌ಲಾಲ್‌ ಬೋಗನನ್ನು ಪ್ರಕರಣದಿಂದ ವಜಾಗೊಳಿಸಿತು.

ಇತ್ತೀಚೆಗೆ ನಾನು ಕಾರ್ಯ ನಿಮಿತ್ತ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ಕಾಂಕೇರ್ ಜಿಲ್ಲೆಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಈ ವಿಷಯ ತಿಳಿಸಿದ್ದೆ. ಅವರು ಅಲ್ಲಿನ ಉಪಕಾರ್ಯದರ್ಶಿಗೆ ಪ್ರಕರಣ ವಹಿಸಿದ್ದು, ಬಳಿಕ ಬೋಗ ಅವರ ಕುಟುಂಬ ಸದಸ್ಯರನ್ನು ಪತ್ತೆ ಮಾಡಿಸಿ ಸಮಗ್ರ ವಿವರಗಳನ್ನು ಮಂಗಳೂರಿನ ಪ್ರಾಧಿಕಾರಕ್ಕೆ ಕಳುಹಿಸಿದ್ದರು ಎಂದರು. ಮಂಗಳೂರು ಪ್ರಾಧಿಕಾರವು ನಿರ್ದೇಶಿಸಿದ ಮೇರೆಗೆ ಮೂಡುಬಿದಿರೆ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಛತ್ತೀಸ್‌ಗಡಕ್ಕೆ ತೆರಳಿ ಬೋಗ ಅವರ ಅಣ್ಣ ಮತ್ತು ಗೆಳೆಯನನ್ನು ಕರೆದುಕೊಂಡು ಮಂಗಳೂರಿಗೆ ಆಗಮಿಸಿದರು. ಸರ್ಕಾರದ ಬೇರೆ ಬೇರೆ ಇಲಾಖೆಗಳ ಸಹಕಾರದಿಂದ ಕೆಲಸ ಮಾಡಿದರೆ ಎಂಥ ಕೆಲಸವನ್ನೂ ಅತಿ ಕಡಿಮೆ ಅವಧಿಯಲ್ಲಿ ಮಾಡಬಹುದು ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ನಿದರ್ಶನವಾಗಿದೆ. ಇದಕ್ಕೆ ಸಹಕರಿಸಿದ ಪೊಲೀಸ್ ಸಿಬ್ಬಂದಿಗಳಾದ ವಿಜಯ್ ಕಾಂಚನ್ ಮತ್ತು ಅಖಿಲ್ ಅಹ್ಮದ್ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಲ್ಲನಗೌಡ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಪೊಲೀಸ್ ಸಿಬ್ಬಂದಿಗಳಾದ ವಿಜಯ್ ಕಾಂಚನ್, ಅಖಿಲ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. _ (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: