ಮೈಸೂರು

ಹೋಮ್ ಡೆವಲಪರ್ಸ್ ನಿಂದ ಭೂ ಹಗರಣ: ಕ್ರಮ ಕೈಗೊಳ್ಳುವಂತೆ ಒತ್ತಾಯ

ಮೈಸೂರು,ಮೇ.15 : ವಸತಿ ಯೋಜನೆಗೆ ಸಂಬಂಧಿಸಿದಂತೆ ಬೃಹತ್ ಭೂ ಹಗರಣವೊಂದು ಮೈಸೂರು ಹೋಮ್ ಡೆವಲಪರ್ಸ್ ಅವರಿಂದ ನಡೆದಿದ್ದು ಇದರಿಂದಾಗಿ ನೂರಾರು ಜನ ನಿವೇಶಾಕಾಂಕ್ಷಿಗಳನ್ನು ವಂಚಿಸಲಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲೆಯ ನಿವೇಶನಾಕಾಂಕ್ಷಿಗಳ ಮತ್ತು ನಿವೇಶನ ವಂಚಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ವೈ.ಗುರುಪ್ರಸಾದ್ ಕೋಡಿಹಳ್ಳಿ ಯೋಗಾಚಾರ್ ಆರೋಪಿಸಿದರು.

ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮೈಸೂರು ಹೋಮ್ ಡೆವಲಪರ್ಸ್ ಅವರು ಕಳೆದ 2005 ರಲ್ಲಿ ಲಿಂಗಾಂಬುದಿ ಗ್ರಾಮದ ಹತ್ತಿರ ರಾಜಾಜಿನಗರ ಎಂಬ ಬಡಾವಣೆಯಲ್ಲಿ ವಸತಿ ನಿವೇಶನವನ್ನು ಅಭಿವೃದ್ಧಿ ಪಡಿಸಿದ್ದರು. ಸ್ವಂತ ಮನೆಯ ಕನಸು ಹೊತ್ತ ನೂರಾರು ಜನ ಅಮಾಯಕರನ್ನು ಮೈಸೂರು ಹೋಮ್ ಡೆವಲಪರ್ಸ್ ನ ಮ್ಯಾನೆಜಿಂಗ್ ಡೈರೆಕ್ಟರ್ ಸೈಯದ್ ನಿಜಾಂ ಅಲಿ ವಂಚಿಸಿ ಹೆಚ್ಚಿನ ದರಕ್ಕೆ ಬೇರೆಯವರಿಗೆ ಮಾರಾಟ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ  ಹಲವು ಬಾರಿ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದ್ದರೂ,  ಕಾನೂನಿಗೆ ತಲೆ ಬಾಗದೆ ತಲೆ ಮರೆಸಿಕೊಂಡು ತಿರುಗುತ್ತಿದ್ದಾನೆ.  ಈ ಪ್ರಕರಣವನ್ನು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದೊಂದು ರಿಯಲ್ ಎಸ್ಟೇಟ್ ವಂಚನೆಯ ವ್ಯವಹಾರವಾಗಿದ್ದು ನಮಗೆ ಜೀವ ಬೆದರಿಕೆ ಇದೆ ಎಂದರು. ಈ ಪ್ರಕರಣವನ್ನು ಒಂದು ತಿಂಗಳೊಳಗೆ ಇತ್ಯರ್ಥಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ಅನಿರ್ಧಿಷ್ಟಾವಧಿ ಅಮರಣಾಂತರ ಉಪವಾಸ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುರಳಿಧರ್ ಹಾಗೂ ಇತರರು ಉಪಸ್ಥಿತರಿದ್ದರು. (ವರದಿ: ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: