ದೇಶಪ್ರಮುಖ ಸುದ್ದಿವಿದೇಶ

ಐಟಿ ಕ್ಷೇತ್ರ : ಭಾರತದಲ್ಲಿ ಪ್ರತಿವರ್ಷ 2 ಲಕ್ಷ ಉದ್ಯೋಗ ಕಡಿತಗೊಳ್ಳುವ ಸಾಧ್ಯತೆ

ದೇಶ (ಪ್ರಮುಖ ಸುದ್ದಿ) ಬೆಂಗಳೂರು, ಮೇ 15 :- ಭಾರತೀಯ ಐಟಿ ಕಂಪನಿಗಳು ಮುಂದಿನ ಮೂರು ವರ್ಷಗಳ ಕಾಲ ಪ್ರತಿವರ್ಷ 1.75 ಲಕ್ಷದಿಂದ 2 ಲಕ್ಷ ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದಕ್ಕೆ ಕಾರಣ ಬದಲಾವಣೆಗೆ ತಕ್ಕಂತೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಭಾರತೀಯ ಐಟಿ ಕಂಪನಿಗಳು ಹಿಂದೆ ಬಿದ್ದಿರುವುದು ಎಂದು ಹೆಡ್ ಹಂಟರ್ಸ್ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ಕೆ. ಲಕ್ಷ್ಮೀಕಾಂತ್ ಅವರು ಹೇಳಿದ್ದಾರೆ. “ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾದಂತೆ ವರ್ಷಂಪ್ರತಿ 56 ಸಾವಿರ ಉದ್ಯೋಗ ಕಡಿತವಾಗಬಹುದು ಎಂಬುದು ಸಾಮಾನ್ಯ ಲೆಕ್ಕಾಚಾರ. ನಿಜವಾಗಿ ಮುಂದಿನ ವರ್ಷಗಳಲ್ಲಿ ವರ್ಷಪ್ರತಿ 1.75 ಲಕ್ಷದಿಂದ 2 ಲಕ್ಷ ಐಟಿ ಇಂಜಿನಿಯರ್‍ಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ” ಎನ್ನುತ್ತಾರೆ ಅವರು.

ಮ್ಯಾಕ್ ಕಿನ್ಸೆಯ್ ಇಂಡಿಯಾ ಮ್ಯಾನೆಜಿಂಗ್ ಡೈರೆಕ್ಟರ್‍ ನೊಶಿರ್ ಕಾಕ ಅವರ ಪ್ರಕಾರ, ಮುಂದಿನ ವರ್ಷಗಳಲ್ಲಿ ತಂತ್ರಜ್ಞಾನ ಬದಲಾವಣೆಯ ಕಾರಣದಿಂದಾಗಿ ಶೇಕಡಾ 50-60 ರಷ್ಟು ಉದ್ಯೋಗಿಗಳಿಗೆ ಹೊಸ ತಾಂತ್ರಿಕತೆಯ ಕೌಶಲಗಳನ್ನು ತರಬೇತಿ ಮೂಲಕ ತಿಳಿಸಿಕೊಡಬೇಕಾದ ಅವಶ್ಯಕತೆ ಎದುರಾಗುತ್ತದೆ. ಭಾರತೀಯ ಐಟಿ ಕ್ಷೇತ್ರದಲ್ಲಿ 3.9 ದಶಲಕ್ಷ ಉದ್ಯೋಗಿಗಳು ಕಾರ್ಯನಿರತರಾಗಿದ್ದಾರೆ.

ಇವರಲ್ಲಿ ಬಹುತೇಕ ಮಂದಿಗೆ ಮರುತರಬೇತಿಯ ಅಗತ್ಯವಿದೆ. 30 ರಿಂದ 40 ಶೇಕಡಾ ಜನರು ಹಳೆಯ ಮಾದರಿಯಲ್ಲೇ ಕೆಲಸ ನಿರ್ವಹಿಸಬೇಕಾಗಿದ್ದು, ಅವರಿಗೆ ತರಬೇತು ನೀಡಲು ಸಾಧ್ಯವಾಗುವುದಿಲ್ಲ. ಶೇಕಡಾವಾರು ಲೆಕ್ಕಾಚಾರದಲ್ಲಿ ತೆಗೆದುಕೊಳ್ಳುವುದಾದರೆ ಒಟ್ಟು 6 ಲಕ್ಷ ಉದ್ಯೋಗಿಗಳು ಅಪ್ರಸ್ತುತವಾಗಲಿದ್ದು, ಪ್ರತಿವರ್ಷ 3 ಲಕ್ಷ ಉದ್ಯೋಗಗಿಳನ್ನು ಕಡಿತಗೊಳಿಸಬೇಕಾದ ಅಗತ್ಯ ಎದುರಾಗುತ್ತದೆ. ಈ ಬೆಳವಣಿಗೆಯಿಂದ ಬೆಂಗಳೂರು, ಮುಂಬೈನಂಥ ನಗರಗಳಲ್ಲಿ ಕೆಲಸ ಮಾಡುವವರು ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ, ಆದರೆ ಕೊಯಮತ್ತೂರಿನಂತಹ 2ನೇ ಹಂತದ ನಗರಗಳ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅವರು.

“ಕ್ಲೌಡ್” ಭಯ !

ಕ್ಲೌಡ್’ನಂತಹ ತಂತ್ರಜ್ಞಾನಗಳು ಅಭಿವೃದ್ಧಿಯಾದ ನಂತರ ಈಗ ಐಟಿ ಸೇವೆಗಳಲ್ಲೂ ಬದಲಾವಣೆಯಾಗಿದೆ. ಹೊಸ ಮತ್ತು ಹಳೆಯ ತಂತ್ರಜ್ಞಾನ ಆಧಾರಿತವಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು ಉತ್ತಮ ರೀತಿಯಲ್ಲಿ ಸಂಯೋಜಿಸುವ ಕಂಪನಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಯಶಸ್ವಿಯಾಗಲಿವೆ ಎಂದು ‘ಲೈವ್ ಮಿಂಟ್’ ವರದಿ ಹೇಳುತ್ತದೆ.

“ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ಈ ವಿಚಾರದಲ್ಲಿ ದೂಷಿಸುವುದು ಸಾಧ್ಯವಿಲ್ಲ. ಏಕೆಂದರೆ ಅಮೆರಿಕದ ನೀತಿಗಳನ್ನು ಬದಲಾವಣೆ ಮಾಡುವುದು ಅವರ ಸ್ವಂತ ವಿಚಾರ. ಆದರೆ ತಾಂತ್ರಿಕ ಬದಲಾವಣೆಯ ಕಾರಣ 35 ಮತ್ತು ಹೆಚ್ಚಿನ ವಯಸ್ಸಿನವರು ಉದ್ಯೋಗ ಕಳೆದುಕೊಳ್ಳಲಿದ್ದು, ಮತ್ತೆ ಅವರು ಉದ್ಯೋಗ ಪಡೆದುಕೊಳ್ಳುವುದು ಕಷ್ಟದ ಮಾತು” ಎಂಬುದು ಹಂಟರ್ಸ್ ಇಂಡಿಯಾ ಮುಖ್ಯಸ್ಥ ಲಕ್ಷ್ಮೀಕಾಂತ್ ಅವರು ಹೇಳುವ ಮಾತು.

-ಎನ್.ಬಿ.ಎನ್.

Leave a Reply

comments

Related Articles

error: