ಮೈಸೂರು

ನಾಗರಹೊಳೆಯಿಂದ ಸಿಗಲಿದೆ ಗಜಗಣತಿಗೆ ಚಾಲನೆ

ಮೈಸೂರು, ಮೇ.15:-  ಗಜರಾಜನನ್ನು  ನೋಡಲಿಕ್ಕೇ  ಏನೋ ಒಂಥರಾ ಖುಷಿ. ಅವನು ಹೆಜ್ಜೆ ಇಟ್ಟನೆಂದರೆ ಅದರಲ್ಲಿರುವ ಗಾಂಭೀರ್ಯತೆಗೆ ಎಂಥವರೂ ತಲೆಬಾಗಲೇ ಬೇಕು. ಬಹುಶಃ ಆನೆ ನನಗೆ ಇಷ್ಟವಿಲ್ಲ ಎಂದು ಹೇಳುವವರು ಈ ಪ್ರಪಂಚದಲ್ಲಿ ಯಾರೂ ಇರಲಿಕ್ಕಿಲ್ಲ. ಎಲ್ಲರಿಗೂ ಗಜರಾಜನೆಂದರೆ ಏನೋ ಒಂದು ರೀತಿಯ ಅಕ್ಕರಾಸ್ಥೆ. ಇದೀಗ ಮೇ.16ರಿಂದ ಗಜಗಣತಿ ಆರಂಭವಾಗಲಿದೆ.

ಮೇ.16ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಗಜಗಣತಿಗೆ ಚಾಲನೆ ದೊರಕಲಿದೆ. ಸಿಟಿಟುಡೆ ಯೊಂದಿಗೆ ಎಸಿಎಫ್  ಬೆಳ್ಳಿಯಪ್ಪ ಮಾತನಾಡಿ ಮೇ.16ರಿಂದ ಆನೆಯ ಗಣತಿ ಆರಂಭವಾಗಲಿದೆ. ಆನೆಯ ಗಣತಿಯಲ್ಲಿ ಟ್ರಾಂಜಾಕ್ಟ್ ಲೈನ್ ಗಣತಿ, ಆನೆ ಲದ್ದಿ ಗಣತಿ ಹಾಗೂ ಕೆರೆಕಟ್ಟೆ, ಹೊಳೆ ಬಳಿ ಕುಳಿತು ನಡೆಸುವ ಗಣತಿ ನಡೆಯಲಿದೆ. ಕೆರೆ ಕಟ್ಟೆಗಳ ಬಳಿ ಕುಳಿತು ಗಣತಿ ಮಾಡುವ ವೇಳೆ ಆನೆಗಳ ಹೆಚ್ಚಿನ ಫೋಟೋ ತೆಗೆಯಬೇಕಾಗುತ್ತದೆ. ಗಣತಿಗೆ ತೆರಳುವಾಗ ಹಗ್ಗ, ಜಿಪಿಎಸ್, ಕಂಪಾಸ್, ಕತ್ತಿ, ದಾಖಲೆ ಪುಸ್ತಕ, ಕುಡಿಯುವ ನೀರು ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು  ಗಣತಿ ನಡೆಸುವವರು ತಮ್ಮ ಜತೆಯಲ್ಲಿ ಕೊಂಡೊಯ್ಯಬೇಕಾಗಲಿದೆ. ಗಣತಿ ಕಾರ್ಯಕ್ಕೆ ತೆರಳುವ ಸ್ವಯಂ ಸೇವಕರು ಮೊಬೈಲ್ ಕೊಂಡು ಹೋಗುವಂತಿಲ್ಲ ಎಂದರು. 63 ಜನ ತಂಡದಲ್ಲಿ ಭಾಗವಹಿಸಲಿದ್ದಾರೆ. ಆನೆಗಳ ಗಣತಿಯಿಂದ ಎಷ್ಟು ಆನೆಗಳಿವೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.

ಒಟ್ಟಿನಲ್ಲಿ ನಾಳೆಯಿಂದ ಗಜಗಣತಿ ಆರಂಭವಾಗಲಿದ್ದು, ಅರಣ್ಯಾಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗಣತಿ ನಡೆಸುವವರಿಗೆ ಯಾವ ರೀತಿ ನಡೆಸಬೇಕೆನ್ನುವ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: