ಮೈಸೂರು

ಮುಡಾ ನಿರ್ಮಿಸಿರುವ ಬಡಾವಣೆಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ : ಹೆಚ್. ವಿ.ರಾಜೀವ್

ಮೈಸೂರು ಜೂ.23:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬಡಾವಣೆಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು‌ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ವಿ ರಾಜೀವ್ ತಿಳಿಸಿದರು.

ಇಂದು ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಮುಡಾದಿಂದ ಅನುಮೋದನೆಯಾಗಿರುವ ಖಾಸಗಿ ಬಡಾವಣೆಗಳಿಗೂ ಮೂಲಭೂತ ಸೌಕರ್ಯವಾದ ಕುಡಿಯುವ ನೀರನ್ನು ಕಬಿನಿ ಮೂಲದಿಂದ ಒದಗಿಸಲಾಗುವುದು. ಇದಕ್ಕೆ ಅಗತ್ಯವಿರುವ 150 ಕೋಟಿ ಅನುದಾನದಲ್ಲಿ 100 ಕೋಟಿಯನ್ನು ಮುಡಾ ಭರಿಸಲಿದೆ. ಈ ಕುರಿತು ಮುಡಾ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೈಸೂರು ನಗರದ ಮುಂದಿನ 20 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸುಗಮ ಸಂಚಾರಕ್ಕಾಗಿ 73.25 ಕಿಮೀ ಉದ್ದದ ಹೊರ ವರ್ತುಲ ರಸ್ತೆ ಅಭಿವೃದ್ಧಿ ಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರ ವಿಸ್ತೃತ ಯೋಜನಾ ವರದಿಯನ್ನು ಭಾರತ್ ಮಾಲಾ ಫೇಸ್-2 ಯೋಜನೆಯಲ್ಲಿ ಸೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಂದಿಕೊಂಡಿರುವ ಹೊರವರ್ತುಲ ರಸ್ತೆಯಲ್ಲಿನ ವಿದ್ಯುತ್ ಕಂಬಗಳ ಕೇಬಲ್ ದುರಸ್ತಿ, ಎಲ್ ಇಡಿ ದೀಪಗಳ ಅಳವಡಿಕೆ ಮತ್ತು ನಿರ್ವಹಣಾ ಕಾರ್ಯಕ್ಕೆ 12 ಕೋಟಿ ಅನುದಾನ ಬಿಡುಗಡೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಮುಡಾ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ಹಾಲಿ-ಮಾಜಿ ಸೈನಿಕರಿಗೆ ಒಂದು ನಿವೇಶನ ಅಥವಾ ಮನೆಗೆ ಸೀಮಿತವಾದಂತೆ ಆಸ್ತಿ ತೆರಿಗೆಯಲ್ಲಿ, ಶೇಕಡ 50ರಷ್ಟು ವಿನಾಯಿತಿ ನೀಡಲು ಮುಡಾ ಸಭೆಯಲ್ಲಿ ತೀರ್ಮಾಸಲಾಗಿದೆ ಎಂದು ಸ್ಪಷ್ಟಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: