ಮೈಸೂರು

ರೋಟರಿ ಐವರಿ ಸಿಟಿ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಗಣ್ಯರಿಗೆ ಸನ್ಮಾನ

ಮೈಸೂರು, ಜೂ.23:- ನಗರದ ರೋಟರಿ ಐವರಿ ಸಿಟಿ ವತಿಯಿಂದ ಇಂದು  ಖಾಸಗಿ ಹೊಟೇಲ್‍ನಲ್ಲಿ 2022-23ರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ರೋಟರ್ಯಾಕ್ಟ್ ವರ್ಲ್ಡ್ ನ ಸಹ ಅಧ್ಯಕ್ಷ ರೊ.ಡಾ.ರವಿ ವಡ್ಲಮನಿ ಅವರು ಪದಗ್ರಹಣ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಕೋರಿ, ನಂತರ ಮಾತನಾಡಿ, ರೋಟರಿ ಸೇವಾ ಸಂಸ್ಥೆ ಸೇವಾ ಮನೋಭಾವದ ಸಾರ್ವಜನಿಕ ಸಂಸ್ಥೆ. ಸೇವೆಯ ಮೂಲಕ ಜನರಿಗೆ ಸಹಾಯ, ಸಹಕಾರ ನೀಡುವುದು ಇದರ ಬಹಳ ಮುಖ್ಯವಾದ ಅಂಶ. ಸಮುದಾಯಗಳನ್ನು ಪರಿವರ್ತಿಸುವುದು ಹಾಗೂ ಸಮಾಜದ ಬದಲಾವಣೆಗೆ ತಮ್ಮ ಕೈಲಾದ ಸಹಾಯವನ್ನು ನೀಡುವುದು ರೋಟರಿಯ ಬಹಳ ಮುಖ್ಯವಾದ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ನೊಂದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು, ಸಾಂತ್ವನ ಹೇಳಿ ಸಮಾಜದಲ್ಲಿ ಎಲ್ಲರಂತೆ ಬದುಕಬೇಕೆಂಬ ಆಸೆಯನ್ನು ಬೆಳೆಸುವಂತೆ ಮಾಡಿ, ಸಮಾಜದ ಮುಖ್ಯ ವಾಹಿನಿಗೆ ಅವರನ್ನು ತರುವುದು ಮುಖ್ಯ ಗುರಿಯಾಗಿದೆ ಎಂದರು.

ಎಲ್ಲವನ್ನೂ ಸರ್ಕಾರದಿಂದ ಅವಲಂಬಿಸದೇ ಸಾರ್ವಜನಿಕ ಸಂಘ-ಸಂಸ್ಥೆಗಳು ಕೂಡ ಕೈಜೋಡಿಸಿ ಕಾರ್ಯಕ್ರಮ ಕೈಗೊಂಡಾಗ ಸಮಾಜದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು. ಆದ್ದರಿಂದ ನಮ್ಮ ರೋಟರಿ ಸಂಸ್ಥೆಯು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವುದು, ಹಸಿವು ಮುಕ್ತ ಜೀವನ, ರೋಗಮುಕ್ತ ಸಮಾಜ, ಆರೋಗ್ಯ ವೃದ್ಧಿ, ಕುಟುಂಬ ನಿರ್ವಹಣೆ, ಪರಿಸರ ಮತ್ತು ಮಾಲಿನ್ಯವನ್ನು ಶುದ್ಧಗೊಳಿಸುವುದು, ಕುಡಿಯಲು ಶುದ್ಧವಾದ ನೀರನ್ನು ಒದಗಿಸಿ, ಆರೋಗ್ಯವನ್ನು ಕಾಪಾಡುವುದೇ ನಮ್ಮೆಲ್ಲರ ಗುರಿಯಾಗಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಎಂ.ಎನ್.ರಮೇಶ್ ಅವರು ಮಾತನಾಡಿ, ರೋಟರಿ ಸೇವಾ ಸಂಸ್ಥೆಯು ರಾಜಕೀಯ ಹಾಗೂ ಧಾರ್ಮಿಕ ಮುಕ್ತ ಸಂಸ್ಥೆಯಾಗಿದ್ದು, ಜೀವನದಲ್ಲಿ ಸಾಮಾಜಿಕ ಸಮಾನತೆಯನ್ನು ತರುವುದೇ ಇದರ ಮುಖ್ಯ ಅಂಶವಾಗಿದೆ. ಸೇವೆ ಮಾಡುವುದರಿಂದ ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ತೃಪ್ತಿ ಕಾಣಬಹುದು. ಸಮಾಜದ ಸೇವೆ ಸಲ್ಲಿಸದಿದ್ದರೆ ಜೀವನ ಅಪೂರ್ಣವಾಗುವುದೆಂದು ಹಾಗೂ ಆರ್ಥಿಕವಾಗಿ ಮುಂದುವರೆದವರು ಇಲ್ಲದವರ ಕುಟುಂಬಗಳಿಗೆ ಸಹಾಯ, ಸಹಕಾರ ನೀಡಿದಾಗ ಮಾತ್ರ ದೇಶ ಮುಂದುವರೆಯಲು ಸಾಧ್ಯವೆಂದು ತಿಳಿಸಿ, 2022-23ನೇ ಸಾಲಿನ ಕಾರ್ಯಕ್ರಮಗಳ ಸಂಪೂರ್ಣ ವಿವರವನ್ನು ನೀಡಿದರು.
ಇದೇ ಸಂದರ್ಭದಲ್ಲಿ ರೋಟರಿ ಐವರಿ ಸಿಟಿ ನೂತನ ಪದಾಧಿಕಾರಿಗಳಾದ ಗೌರವ ಕಾರ್ಯದರ್ಶಿಯಾಗಿ ಆರ್.ಮುತ್ತುಕುಮಾರನ್, ಖಜಾಂಚಿಯಾಗಿ ಕೇಶವ್ ಕಾಂಚನ್, ಕನ್ಸೂಮರ್ ಅವೇರ್‍ನೆಸ್ ಚೇರ್‍ಮನ್ ಆಗಿ ಸುನಿಲ್ ಎಲ್.ಬಾಳಿಗಾ, ಫೋರ್ ವೇವ್ ಟೆಸ್ಟ್ ಕಮಿಟಿ ವೈಸ್ ಚೇರ್‍ಮನ್ ಆಗಿ ಡಾ.ಎಂ.ಕೆ.ಸಚ್ಚಿದಾನಂದನ್, ರೈಡ್ ಫಾರ್ ರೋಟರಿಯ ವೈಸ್ ಚೇರ್‍ಮನ್ ಆಗಿ ರೊ.ಆರ್.ಮುತ್ತುಕುಮಾರನ್, ಫೆಲೋಷಿಪ್ ಕಮಿಟಿಯ ಜಿಲ್ಲಾ ಸಂಯೋಜಕರಾಗಿ ಬಿ.ಜಿ.ನಾಗರಾಜ್, ರೈಲಾ ಕಮಿಟಿ ಸಂಯೋಜಕರಾಗಿ ಎಂ.ಪೆರುಮಾಳ್, ಫಂಡ್ ರೈಸಿಂಗ್ ವೈಸಿಂಗ್ ವೈಸ್ ಚೇರ್‍ಮನ್ ಬಿ.ಹರೀಶ್, ಸಿಎಸ್‍ಆರ್ ಕಮಿಟಿ ಸಂಯೋಜಕರಾಗಿ ಇಫ್ತಿಕಾರ್ ಅಹಮದ್, ಶೋಭಾ ನಾಗರಾಜು, ಶಕುಂತಲಾ ಬಾಬು,  ಪೆರುಮಾಳ್, ಜ್ಯೋತಿ ಮುಖೇಶ್ ಆಯ್ಕೆ ಆಗಿರುತ್ತಾರೆ. ಇದೇ ಸಂದರ್ಭದಲ್ಲಿ ಮಣಿಪಾಲ್ ಏಷಿಯಾ ಆಸ್ಪತ್ರೆಯ ಡಯಾಬೆಟಾಲಾಜಿಸ್ಟ್ ಡಾ.ಮೋಹನ್ ಕುಮಾರ್ ವಿ., ಮೈಸೂರು ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ.ರೂಪಾ ಪ್ರಕಾಶ್, ಕರ್ನಾಟಕ ಚಾಪ್ಟರ್‍ನ ಅನಾಟೋಮಿಸ್ಟ್ ಡಾ.ಎನ್.ಎಂ.ಶ್ಯಾಮಸುಂದರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮೈಸೂರಿನ ವಿವೇಕಾ ಯೋಗಾ ಫೌಂಡೇಶನ್ ವತಿಯಿಂದ ವಿವಿಧ ಬಗೆಯ ಯೋಗ ಭಂಗಿಗಳ ಮನಮೋಹಕ ಯೋಗ ಪ್ರದರ್ಶನವನ್ನು ಪ್ರದರ್ಶಿಸಿದರು. ಕಾರ್ಯಕ್ರಮಕ್ಕೆ ಸ್ವಾಗತವನ್ನು ಇಫ್ತಿಕಾರ್ ಅಹಮದ್ ನೆರವೇರಿಸಿದರೆ, ನಿರೂಪಣೆಯನ್ನು ಸಂಜಯ್ ಅರಸ್ ಮಾಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: