ಮೈಸೂರು

ಸಂಗೀತ ತರಗತಿಗೆ ತಂಗಿಯನ್ನು ಸೇರಿಸುವ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳುವು : ಖದೀಮರ ಬಂಧನ

ಮೈಸೂರು,ಜೂ.24:- ಸಂಗೀತ ತರಗತಿಗೆ ತಂಗಿಯನ್ನು ಸೇರಿಸಬೇಕೆಂದು ನೆಪ ಮಾಡಿಕೊಂಡು ಬಂದ ನಾಲ್ವರು ಖದೀಮರು ಹಾಡಹಗಲೇ ಮಹಿಳೆಯನ್ನು ಕಟ್ಟಿಹಾಕಿ ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ದೋಚಿದ್ದು, ಕೆಲವೇ ಗಂಟೆಗಳಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಬಂಧಿತರನ್ನು ಮೈಸೂರಿನ ಶ್ರೇಯಸ್(22), ಬೆಂಗಳೂರಿನ ಪ್ರವೀನ್ ಕುಮಾರ್(32), ಅವಿನಾಶ್(30),ರವಿನಂದನ್(30) ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿತರಿಂದ 4ಸಾವಿರ ರೂ.ನಗದು, 70,000ರೂ.ಮೌಲ್ಯದ 15ಗ್ರಾಂ ಚಿನ್ನಾಭರಣ, 200ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಜೂನ್ 21ರಂದು ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರಿನ ಶ್ರೀರಾಂಪುರದ ಬೆಮೆಲ್ ಲೇ ಔಟ್ 2ನೇ ಕ್ರಾಸ್ ನಲ್ಲಿರುವ ಜಿ.ರವೀಂದ್ರ ಅವರ ಮನೆಗೆ ಬಂದು ಇಬ್ಬರು ಬಾಗಿಲು ತಟ್ಟಿದ್ದರು. ಸಂಗೀತ ತರಗತಿ ನಡೆಸುತ್ತಿದ್ದ ರವೀಂದ್ರ ಅವರು ಮನೆಯಲ್ಲಿ ಇರಲಿಲ್ಲ. ಅವರ ಪತ್ನಿ ಕೆ.ರಂಜನಿ ಅವರು ಬಾಗಿಲು ತೆರೆದಾಗ ಯುವಕರಲ್ಲಿ ಓರ್ವ ತನ್ನ ತಂಗಿಯನ್ನು ಸಂಗೀತ ಕಛೇರಿಗೆ ಸೇರಿಸಬೇಕೆಂದು ಹೇಳಿದ್ದು, ಈ ವೇಳೆ ರಂಜನಿ ಮನೆಯೊಳಗೆ ಕರೆದಿದ್ದಾರೆ.

ಕುಳಿತುಕೊಂಡ ನಂತರ ಕುಡಿಯಲು ನೀರು ಕೇಳಿದ ಖದೀಮರು ಒಳಗೆ ಹೋಗಿ ನೀರು ತರುವಷ್ಟರಲ್ಲಿ ಬಾಗಿಲು ಬಂದ್ ಮಾಡಿ ರಂಜನಿಯವರ ಕೈಗಳನ್ನು ಬಟ್ಟೆಯಿಂದ ಕಟ್ಟಿ ಕುತ್ತಿಗೆ ಬಳಿ ಚಾಕು ಇಟ್ಟು ಬೆದರಿಸಿ ಚಿನ್ನದ ಸರ, ಬೆಳ್ಳಿ ಆಭರಣಗಳು ಹಾಗೂ 4ಸಾವಿರ ರೂ.ನಗದನ್ನು ದೋಚಿ ಹೊರಗಡೆ ನಿಂತಿದ್ದ ಮತ್ತಿಬ್ಬರೊಂದಿಗೆ ಪರಾರಿಯಾಗಿದ್ದರು. ಘಟನೆಯಿಂದ ಗಾಬರಿಯಾಗಿದ್ದ ರಂಜನಿ ಮನೆಗೆ ಮರಳಿದ ರವೀಂದ್ರ ಅವರಿಗೆ ವಿಷಯ ತಿಳಿಸಿದ ತಕ್ಷಣ ಸಂಜೆ 4ಗಂಟೆಯ ವೇಳೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕುವೆಂಪುನಗರ ಠಾಣಾ ಇನ್ಸಪೆಕ್ಟರ್ ಷಣ್ಮುಗ ವರ್ಮ ಹಾಗೂ ಸಿಬ್ಬಂದಿ ಮಹಜರು ನಡೆಸಿ ಆರೋಪಿಗಳ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದರು. ಸುಳಿವಿನ ಜಾಡು ಹಿಡಿದು ಕಾರ್ಯೋನ್ಮುಖರಾದ ಪೊಲೀಸರು ಬೆಂಗಳೂರಿಗೆ ಪರಾರಿಯಾಗಲಿದ್ದ ಖದೀಮರನ್ನು ಅದೇ ದೀನ ರಾತ್ರಿ 7ಗಂಟೆಯ ಸುಮಾರಿಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ದೋಚಿದ್ದ ನಗದು, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೆಲಸವಿಲ್ಲದ ಕಾರಣ ಖರ್ಚಿಗಾಗಿ ಈ ವೃತ್ತಿಗಿಳಿದಿರುವುದಾಗಿ ಬಾಯ್ ಬಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಮಾರ್ಗದರ್ಶನದಲ್ಲಿ ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ ಮೇಲ್ವಿಚಾರಣೆಯೊಂದಿಗೆ ಕೆ.ಆರ್.ಉಪವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್ ಷಣ್ಮುಗ ವರ್ಮ, ಸಬ್ ಇನ್ಸಪೆಕ್ಟರ್ ಗಳಾದ ರಾಧ, ಗೋಪಾಲಸ್ವಾಮಿ, ಎಎಸ್ ಐ ಮುರಳೀಗೌಡ, ಸಿಬ್ಬಂದಿಗಳಾದ ಮಂಜುನಾಥ, ಪುಟ್ಟಪ್ಪ, ಹರ್ಷವರ್ಧನ, ಹಜರತ್, ಯೋಗೇಶ್, ಕುಮಾರ್, ನಾಗೇಶ್, ಚನ್ನಪ್ಪ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: