ಕರ್ನಾಟಕಪ್ರಮುಖ ಸುದ್ದಿ

ಗೃಹ ಪ್ರವೇಶದ ಮನೆಗೆ ನುಗ್ಗಿದ ಮಂಗಳಮುಖಿಯರ ಗುಂಪು : ಕೇಳಿದಷ್ಟು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಮನೆಯವರ ಮೇಲೆ ಹಲ್ಲೆ

ರಾಜ್ಯ(ಬೆಂಗಳೂರು),ಜೂ.24 : – ಗೃಹ ಪ್ರವೇಶದ ವೇಳೆ ಮನೆಗೆ ನುಗ್ಗಿದ ಮಂಗಳಮುಖಿಯರ ಗುಂಪೊಂದು ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನ ರಾಮಮೂರ್ತಿನಗರ ಸಮೀಪದ ಕಲ್ಕೆರೆ ಚನ್ನಸಂದ್ರದ ಪೂಜಾ ಗಾರ್ಡನ್ 2ನೇ ಹಂತದಲ್ಲಿ ಲೋಕೇಶ್ ಅವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ 7.30ಕ್ಕೆ ಗೃಹಪ್ರವೇಶದ ಪೂಜೆ ನಡೆಯುತ್ತಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮಂಗಳಮುಖಿಯರು 10 ರೂ. ನೋಟಿನಲ್ಲಿ ದೃಷ್ಟಿ ತೆಗೆದು 25 ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.

ಈ ವೇಳೆ ಮೊದಲು 1 ಸಾವಿರ ರೂಪಾಯಿಯನ್ನು ಲೋಕೇಶ್ ನೀಡಿದ್ದಾರೆ. ಆದರೆ ನಮಗೆ 25 ಸಾವಿರ ರೂ. ನೀಡಲೇಬೇಕೆಂದು ಮಂಗಳಮುಖಿಯರು ಹಠಹಿಡಿದಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದ ಹಣ ನೀಡಲು ನಿರಾಕರಿಸಿದ್ದಕ್ಕೆ ಮನೆಯವರಿಗೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಂಗಳಮುಖಿಯರು ಅಸಭ್ಯವಾಗಿ ವರ್ತಿಸಿದ್ದಾರೆ.

ಮಂಗಳಮುಖಿಯರು ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಸಹಿಸಲಾಗದೇ ಲೋಕೇಶ್ ಅವರ ಪತ್ನಿ ಆಶಾ ಎಲ್ಲರನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಂಗಳಮುಖಿಯರು ಲೋಕೇಶ್ ಪತ್ನಿ ಆಶಾ ಅವರ ಕೆನ್ನೆಗೆ ಹೊಡೆದಿದ್ದಾರೆ. ನಂತರ ಗಲಾಟೆ ಮಾಡದಂತೆ ಬುದ್ಧಿ ಹೇಳಲು ಬಂದ ಸಂಬಂಧಿ ಮಹೇಂದ್ರ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಲೋಕೇಶ್ ಅವರ ಮಾವ ಸೊನ್ನೆಗೌಡರನ್ನು ತಳ್ಳಾಡಿ ರಂಪಾಟ ಮಾಡಿದ್ದಾರೆ. ಗೃಹ ಪ್ರವೇಶದ ದಿನವೇ ಮನೆಯವರಿಗೆ ಹಿಡಿಶಾಪ ಹಾಕಿದ್ದಾರೆ.

ಅಷ್ಟರಲ್ಲಿ ಲೋಕೇಶ್ ಸಂಬಂಧಿಯೊಬ್ಬರು ಹೊಯ್ಸಳ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಮನೆಯಿಂದ ಹೊರಬಂದು ಹೊರಗಿದ್ದ ಕುರ್ಚಿ ಒಡೆದು ಹಾಕಿ ಆಟೋದಲ್ಲಿ ಪರಾರಿಯಾಗಿದ್ದಾರೆ. ಪೊಲೀಸರಿಗೆ ದೂರು ಕೊಡುತ್ತೇವೆ ಎಂದಿದ್ದಕ್ಕೆ ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇದೀಗ ಈ ಬಗ್ಗೆ   ಲೋಕೇಶ್ ಅವರು ದೂರು ದಾಖಲಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.(ಎಸ್.ಎಂ)

Leave a Reply

comments

Related Articles

error: