ಮೈಸೂರು

ಲಂಚ ಪಡೆಯುವಾಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸಿಬಿ ಬಲೆಗೆ

ಮೈಸೂರು,ಜೂ.24:- ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.

ಬಂಧಿತರನ್ನು ಹೆಚ್.ಡಿ.ಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್, ಕಛೇರಿಯ ಅಧೀಕ್ಷಕ ಶಂಕರ್ ಎಂದು ಹೇಳಲಾಗಿದ್ದು, ಎಸ್ ಡಿ ಎ ರವಿಕುಮಾರ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಂಜನಗೂಡು ತಾಲೂಕಿನ ರಾಂಪುರದ ಸಿದ್ದರಾಜು ಅವರು ಹೆಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮೇ.31ರಂದು ನಿವೃತ್ತಿ ಹೊಂದಿದ್ದರು. ಬಳಿಕ ತಮ್ಮ ನಿವೃತ್ತಿ ವೇತನ ಪಡೆಯಲು ಹೆಚ್.ಡಿ.ಕೋಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತೆರಳಿ ನಿವೃತ್ತಿ ವೇತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬೆಂಗಳೂರಿನ ಮಹಾಲೆಕ್ಕಾಧಿಕಾರಿ ಕಛೇರಿಗೆ ಕಳುಹಿಸಲು ಕಛೇರಿಯ ಎಸ್ ಡಿ ಎ ರವಿಕುಮಾರ್ ಅವರಿಗೆ ಜೂ.16ರಂದು ಅರ್ಜಿ ಸಲ್ಲಿಸಿದ್ದರು.

ಆದರೆ ನಿವೃತ್ತಿ ವೇತನ ಸಂಬಂಧಿಸಿದ ದಾಖಲೆಯನ್ನು ಬೆಂಗಳೂರಿಗೆ ಕಳುಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್, ಕಛೇರಿ ಅಧೀಕ್ಷಕ ಶಂಕರ್ ಹಾಗೂ ತನಗೆ 9ಸಾವಿರ  ಲಂಚನೀಡಬೇಕು ಎಂದು ಜೂ.19ರಂದು ಬೇಡಿಕೆ ಇಟ್ಟಿದ್ದರು. ಇದರಿಂದ ಮನನೊಂದ ನಿವೃತ್ತ ಶಿಕ್ಷಕ ಸಿದ್ದರಾಜು ಮೈಸೂರಿನ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನನ್ವಯ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಕಛೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್ 5ಸಾವಿರ ಹಾಗೂ ಕಛೇರಿ ಅಧೀಕ್ಷಕ ಶಂಕರ್ 2ಸಾವಿರ ಲಂಚ ಪಡೆಯುವಾಗ ಹಣದ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಬಳಿಕ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೂರುದಾರ ಸಿದ್ದರಾಜು ಅವರು ನೀಡಿದ ದೂರಿನ ಆಧಾರದ ಅಡಿಯಲ್ಲಿ ಎಸ್ ಡಿಎ ರವಿಕುಮಾರ್ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದು ತಲೆಮರೆಸಿಕೊಂಡಿರುವ ಆತನ ಬಂಧನಕ್ಕೂ ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ ಪಿ ತಮ್ಮಯ್ಯ, ಇನ್ಸಪೆಕ್ಟರ್ ಚಿತ್ತರಂಜನ್, ಸಿಬ್ಬಂದಿಗಳಾದ ಮೋಹನ್, ಕೃಷ್ಣ, ಚೇತನ್, ಗುರುಪ್ರಸಾದ್, ಮಂಜು, ಪುಷ್ಪಲತಾ, ಯೋಗೇಶ್ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: