ನಮ್ಮೂರುಮೈಸೂರು

ನಾಳೆಯಿಂದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಮಟ್ಟದ ‘ಕಲಾ ಸಂಭ್ರಮ’

ಮೈಸೂರು,ಜೂ.24 :- ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂ.25 ರಂದು ‘ಕಲಾ ಸಂಭ್ರಮ’ ರಾಜ್ಯ ಮಟ್ಟದ ಅಂತರ ಕಾಲೇಜು ಕಲಾ ಉತ್ಸವ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಮರೀಗೌಡ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತೀಕರಣ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ದೇಶೀಯ ಕಲೆ ಹಾಗೂ ಸಂಸ್ಕೃತಿ ನಶಿಸುತ್ತಿವೆ. ಹೀಗಾಗಿ ದೇಶೀಯ ಕಲೆ ಪ್ರೋತ್ಸಾಹಿಸುವ ನಿಟ್ಟಿ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು.

‘ಆಧುನಿಕ ಜೀವನ ಶೈಲಿ ಭಾರತದ ಸಂಸ್ಕೃತಿಗೆ ಮಾರಕ? ಎಂಬ ವಿಷಯ ಕುರಿತು ಚರ್ಚಾ ಸ್ಪರ್ಧೆ, ಭಾವಗೀತೆ ಗಾಯನ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಪ್ರಥಮ ದರ್ಜೆ ಕಾಲೇಜುಗಳಿಂದ ಒಂದು ಸಾವಿರ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಹೊಂದಿದ್ದೇವೆ. ಈಗಾಗಲೇ 700 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಾಲೇಜುಗಳ ಮುಖ್ಯಸ್ಥರು ತಮ್ಮ ಕಾಲೇಜುಗಳಿಂದ ತಂಡಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದರು.

ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ‘ಕಲಾ ಸಂಭ್ರಮ’ ಕಾರ್ಯಕ್ರಮಕ್ಕೆ ಬೆಳಗ್ಗೆ 9.30ಕ್ಕೆ ನಗರ ಪೊಲೀಸ್ ಉಪ ಆಯುಕ್ತರಾದ ಎಂ.ಎಸ್.ಗೀತಾ ಪ್ರಸನ್ನ ಚಾಲನೆ ನೀಡಲಿದ್ದಾರೆ. ಚಿತ್ರ ನಟ ಚಂದನ್ ಆಚಾರ್, ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆಯನ್ನು ವಹಿಸುವರು ಎಂಬ ಮಾಹಿತಿಯನ್ನು ನೀಡಿದರು.

ಚರ್ಚಾ ಸ್ಪರ್ಧೆ ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ. ಮಧ್ಯಾಹ್ನ  ಗಂಟೆಗೆ ಭಾವಗೀತೆ ಸ್ಪರ್ಧೆ ಆರಂಭವಾಗಲಿದೆ. ಮೈಸೂರು ವಿವಿ ಲಲಿತ ಕಲಾ ಕಾಲೇಜಿನ ಉಪನ್ಯಾಸಕಿ ವಿದೂಷಿ ರಶ್ಮಿ ಚಿಕ್ಕಮಗಳೂರು ಅಧ್ಯಕ್ಷತೆ ವಹಿಸುವವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ.ಟಿ. ಶ್ರೀನಿವಾಸ್, ಪ್ರೊ.ಮೋಹನ್ ಕುಮಾರ್, ಡಾ.ಬಿ.ಟಿ.ರಘು ಉಪಸ್ಥಿತರಿದ್ದರು. (ಎಸ್.ಎಂ)

Leave a Reply

comments

Related Articles

error: