ಮೈಸೂರು

ವಿದ್ಯುತ್ ದರ ಏರಿಸಿರುವುದನ್ನು ಖಂಡಿಸಿ ಪ್ರತಿಭಟನೆ

ಮೈಸೂರು,ಜೂ.24:- ವಿದ್ಯುತ್ ದರ ಏರಿಸಿರುವುದನ್ನು ಖಂಡಿಸಿ ಭಾರತ ಕಮ್ಯುನಿಷ್ಟ್ ಪಕ್ಷ(ಮಾರ್ಕ್ಸ್ ವಾದಿ)ವತಿಯಿಂದ ಪ್ರತಿಭಟನೆ ನಡೆಯಿತು.

ವಿವಿ ಮೊಹಲ್ಲಾದಲ್ಲಿರುವ ವಿಭಾಗೀಯ ಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಪ್ರತಿ ಯೂನಿಟ್ ವಿದ್ಯುತ್ ಬೆಲೆಯನ್ನು 10ಪೈಸೆಗಳಿಂದ 20ಪೈಸೆಗೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ನ್ನು 15ಪೈಸೆಯಿಂದ 25ಪೈಸೆಗೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಮತ್ತೊಂದು ಹೊರೆಯನ್ನು ಹೇರಲು ಮುಂದಾದ ವಿದ್ಯುತ್ ಕಂಪನಿಗಳ ಕ್ರಮವನ್ನು ಖಂಡಿಸುತ್ತೇವೆ. ಇದು ಜನತೆಯ ಮೇಲೆ ಎರಡು ರೀತಿಯ ತೆರಿಗೆಯ ಬರೆಯನ್ನು ಎಳೆದಿದ್ದು ಈ ಕೂಡಲೇ ಬೆಲೆ ಏರಿಕೆಯ ಕ್ರಮಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಕಳೆದ 2009ರಿಂದ 2022ರ ಇಂದಿನವರೆಗೆ ಪ್ರತಿ ಯೂನಿಟ್ ವಿದ್ಯುತ್ ಬೆಲೆಯನ್ನು 2.70ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯು ಎಲ್ಲಾ ಮನೆಗಳ ಬಿಲ್ ಗಳನ್ನು ಹೆಚ್ಚಿಸಲಿದೆ. ವಾಣಿಜ್ಯ ಬಳಕೆಯ ವಿದ್ಯುತ್ ಬೆಲೆಗಳ ಏರಿಕೆಯು ಸಣ್ಣ ಕೈಗಾರಿಕೆಗಳು ಮುಚ್ಚುವಂತಹ ಪರಿಸ್ಥಿತಿಯನ್ನು ವ್ಯಾಪಕಗೊಳಿಸಲಿದೆ. ಹಾಗೂ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಮತ್ತೊಂದು ಹೊರೆಯನ್ನು ಹೇರಲಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಕೂಡಲೇ ಬೆಲೆ ಏರಿಕೆಯ ಕ್ರಮಗಳನ್ನು ಹಿಂಪಡೆಯಲು ಅಗತ್ಯ ಕ್ರಮವಹಿಸಬೇಕು. ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಸರಬರಾಜುಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳದೆ ಆ ಮೂಲಕ ಆಗುವ ವಿದ್ಯುತ್ ನಷ್ಟವನ್ನು ಜನಸಾಮಾನ್ಯರ ಮೇಲೆ ಹೇರುತ್ತಿರುವುದನ್ನು ಒಪ್ಪಲಾಗದು. ಇದಕ್ಕೆ ಆ ಕಂಪನಿಗಳು ಮತ್ತು ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಸಾರ್ವಜನಿಕ ಕ್ಷೇತ್ರದ ಕೆಪಿಸಿಎಲ್ ಮೂಲಕ ಅತ್ಯಂತ ಕಡಿಮೆ ಬೆಲೆಗೆ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಖಾಸಗೀ ಕಂಪನಿಗಳ ದುಬಾರಿ ವಿದ್ಯುತ್ ಖರೀದಿಯನ್ನು ಮುಂದುವರಿಸಲು ಆಗಿಂದಾಗ್ಗೆ ರಾಜ್ಯದ ಹಲವು ಘಟಕಗಳಲ್ಲಿ ಸಲ್ಲದ ನೆಪ ಹೇಳಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತು ಅಗತ್ಯ ಸ್ವತಂತ್ರ ನ್ಯಾಯಾಂಗದ ತನಿಖೆಗೆ ಕ್ರಮವಹಿಸುವುದು ಅಗತ್ಯವಿದೆ. ಅದೇ ರೀತಿ ಸಾರ್ವಜನಿಕ ರಂಗದ ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು ಕಂಪನಿಗಳನ್ನು ಖಾಸಗೀಕರಿಸುವ ಲೂಟಿಕೋರ ಸಂಚಿನ ದುರುದ್ದೇಶವು ಈ ಬೆಲೆ ಏರಿಕೆಯ ಹಿಂದೆ ಅಡಗಿರುವುದನ್ನು ಖಂಡಿಸುತ್ತೇವೆ. ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಜಗದೀಶ್ ಸೂರ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: