ದೇಶಪ್ರಮುಖ ಸುದ್ದಿ

ಗುಜರಾತ್‌ನ ಗೋಧ್ರಾ ನರಮೇಧ ಪ್ರಕರಣ : ನರೇಂದ್ರ ಮೋದಿಗೆ ಎಸ್‌ಐಟಿಯಿಂದ ಕ್ಲೀನ್‌ ಚಿಟ್‌

ರಾಜ್ಯ(ನವದೆಹಲಿ),ಜೂ.24 : ಗುಜರಾತ್‌ನ ಗೋಧ್ರಾ ನರಮೇಧ ನಂತರದ ಹಿಂಸಾಚಾರ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಎಸ್‌ಐಟಿ(ವಿಶೇಷ ತನಿಖಾ ತಂಡ) ಕ್ಲೀನ್‌ ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಗೋಧ್ರಾ ನರಮೇಧ ನಂತರ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು. ಕ್ಲೀನ್‌ ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಹಿಂಸಾಚಾರದ ವೇಳೆ ಹತ್ಯೆಗೀಡಾದ ಸಂಸದ ಇಸಾನ್‌ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್‌, ದಿನೇಶ್‌ ಮಹೇಶ್ವರಿ, ಸಿಟಿ ರವಿಕುಮಾರ್‌ ಅವರಿದ್ಧ ಪೀಠ ಇಂದು ತೀರ್ಪು ಪ್ರಕಟಿಸಿತು. ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿದ್ದನ್ನು ಎತ್ತಿ ಹಿಡಿದ ಕೋರ್ಟ್‌ ಈ ಅರ್ಜಿಗೆ  ಯಾವುದೇ ಅರ್ಹತೆಯಿಲ್ಲ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿದೆ.

ಗುಜರಾತ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ಪರವಾಗಿ ಹಿರಿಯ ವಕಿಲ ಕಪಿಲ್‌ ಸಿಬಲ್‌ ವಾದ ಮಂಡಿಸಿದ್ದರು. ಹಿರಿಯ ವಕೀಲ ಮುಕುಲ್‌ ರೋಹ್ಟಗಿ ಎಸ್‌ಐಟಿ ಪರ ವಾದಿಸಿದ್ದರೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಗುಜರಾತ್‌ ಸರ್ಕಾರದ ಪರವಾಗಿ ವಾದಿಸಿದ್ದರು.

2002ರ ಫೆಬ್ರವರಿ 22 ರಂದು ಗೋದ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್‌ ರೈಲಿನ ಎಸ್6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಪರಿಣಾಮ ಆಯೋಧ್ಯೆಯಿಂದ ಗುಜರಾತ್ ಗೆ ಮರಳುತ್ತಿದ್ದ 59 ಕರಸೇವಕರು ಸಜೀವವಾಗಿ ದಹನವಾಗಿದ್ದರು. ಈ ಘಟನೆ ಬಳಿಕ ಗುಜರಾತಿನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು. ಅನೇಕ ಕಡೆಗಳಲ್ಲಿ ಕೋಮುಗಲಭೆ ಸಂಭವಿಸಿ 1,200 ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿತ್ತು. ವಿಶೇಷವಾಗಿ ಗುಲ್ಬರ್ಗಾ ಸೊಸೈಟಿಯಲ್ಲಿ ನರಮೇಧವೇ ನಡೆದು ಹೋಗಿತ್ತು. ಇದರಲ್ಲಿ ಇಸಾನ್‌ ಜಫ್ರಿ ಸೇರಿ 68 ಮಂದಿ ಹತರಾಗಿದ್ದರು. 2002 ಫೆಬ್ರವರಿ 27ರಿಂದ ಮೇ ತಿಂಗಳವರೆಗೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಇದರ ಹಿಂದೆ ಬಹುದೊಡ್ಡ ಪಿತೂರಿ ಅಡಗಿದೆ. ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾವತಿ ಆಯೋಗ ಅಂದಿನ ಸಿಎಂ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಗಲಭೆ ಪ್ರಕರಣ ಸಂಬಂಧ ನಾನಾವತಿ ಆಯೋಗದ ವರದಿ 2014ರಲ್ಲಿ ಗುಜರಾತ್‌ ಸರ್ಕಾರಕ್ಕೆ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. 2019ರಲ್ಲಿ ಗುಜರಾತ್ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರು ರಾಜ್ಯ ವಿಧಾನಸಭೆಯಲ್ಲಿ ಈ ವರದಿಯನ್ನು ಮಂಡಿಸಿದ್ದರು.

ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಇದು ಪೂರ್ವನಿಯೋಜಿತ ದಂಗೆಯಲ್ಲ. ಈ ದಂಗೆಯನ್ನು ನಿಯಂತ್ರಿಸಲು ಮೋದಿಯವರು ಪ್ರಯತ್ನ ನಡೆಸಿದ್ದರು. ದಂಗೆ ಕುರಿತು ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸುಳ್ಳು ಹೇಳಿದ್ದಾರೆ ಎಂದು 1500 ಪುಟಗಳ ವರದಿಯಲ್ಲಿ ತಿಳಿಸಿತ್ತು.

ಪೊಲೀಸರಿಗಿಂತಲೂ ಪ್ರತಿಭಟನಾಕಾರರ ಸಂಖ್ಯೆ ಜಾಸ್ತಿ ಇತ್ತು. ಇದರ ಜೊತೆಗೆ ಪೊಲೀಸರು ಶಸ್ತ್ರಸಜ್ಜಿತರಾಗಿ ಇರಲಿಲ್ಲ. ಈ ಕಾರಣದಿಂದ ಕೆಲವೊಂದು ಪ್ರದೇಶದಲ್ಲಿ ಪೊಲೀಸರು ಗಲಭೆಯನ್ನು ಸರಿಯಾಗಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ಗಲಭೆ ಪ್ರಕರಣ ಕುರಿತು 2002ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ನಿವೃತ್ತ ನ್ಯಾ. ನಾನಾವತಿ ಮತ್ತು ಅಕ್ಷಯ್ ಮೆಹ್ತಾ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಗುಜರಾತ್ ಸರ್ಕಾರ ಈ ಪ್ರಕರಣದ ತನಿಖೆಗಾಗಿ ರಚಿಸಿದ್ದ ನಾನಾವತಿ ಆಯೋಗದ ವರದಿ ಮೊದಲ ಬಾರಿಗೆ 2008ರಲ್ಲಿ ಮಂಡನೆಯಾಗಿತ್ತು. ಸಬರಮತಿ ಎಕ್ಸ್‍ಪ್ರೆಸ್ ರೈಲಿನ ಎಸ್-6 ಬೋಗಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಲ್ಲ. ಪೆಟ್ರೋಲ್ ಸುರಿದು ಬೋಗಿಗೆ ಬೆಂಕಿ ಹಚ್ಚಲಾಗಿದೆ. ಇದೊಂದು ಯೋಜಿತ ಪಿತೂರಿಯಾಗಿದ್ದು, ಗೋದ್ರಾ ರೈಲ್ವೇ ಸಮೀಪದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ವರದಿಯನ್ನು ಸಲ್ಲಿಸಿತ್ತು. 2014ರಲ್ಲಿ ಆನಂದಿ ಬೆನ್ ನೇತೃತ್ವದ ಸರ್ಕಾರದ ಮುಂದೆ ಅಂತಿಮ ವರದಿಯನ್ನು ಸಲ್ಲಿಸಿತ್ತು.(ಎಸ್.ಎಂ)

Leave a Reply

comments

Related Articles

error: