ಮೈಸೂರು

ಸಾಲಮನ್ನಾ ಮಾಡಲು ಒತ್ತಾಯಿಸಿ ಮೇ.19 ರಂದು ಅನಿರ್ದಿಷ್ಟಾವಧಿ ಧರಣಿ : ಹೊಸೂರು ಕುಮಾರ್

ಮೈಸೂರು, ಮೇ.16:- ರೈತರ ಎಲ್ಲ ಕೃಷಿ ಸಾಲವನ್ನು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲ ಹಾಗೂ ಗ್ರಾಮೀಣ ಜನರಿಗೆ ನೀಡಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ರೈತರಿಂದ ಬಲಾತ್ಕಾರವಾಗಿ ಸಾಲ ವಸೂಲು ಮಾಡದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.

ಹುಣಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ರಾಜ್ಯವೊಂದರಲ್ಲೇ 57ಸಾವಿರಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಉತ್ಪಾದನೆಗಾಗಿ ನೀಡಿರುವ ಸಾಲವನ್ನು ಬಲಾತ್ಕಾರವಾಗಿ ವಸೂಲು ಮಾಡಲಾಗುತ್ತಿದೆ. ರೈತರ ಸಾಲವಸೂಲಿಗಾಗಿ ರೈತರ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಚರಾಸ್ಥಿಯನ್ನು ಜಪ್ತಿ ಮಾಡುವುದು ಅಲ್ಲದೇ ಹಲವಾರು ಕಡೆ ಸಾಲವಸೂಲಿಗಾಗಿ ರೈತರನ್ನು ಜೈಲಿಗೆ ಕಳುಹಿಸುವ ಹೀನಕೃತ್ಯಕ್ಕೆ ಕೈಹಾಕಿದೆ. ಸರ್ಕಾರ ನೀಡುತ್ತಿರುವ ಹಾಲಿನ ಸಹಾಯಧನ, ಉದ್ಯೋಗ ಖಾತ್ರಿಹಣ, ವೃದ್ಧಾಪ್ಯವೇತನ, ಬೆಳೆವಿಮಾ ಪರಿಹಾರ ಇತ್ಯಾದಿ ಸಹಾಯಧನಗಳನ್ನು ಕೂಡ ಬ್ಯಾಂಕುಗಳು ತಮ್ಮ ಸಾಲಕ್ಕೆ ಜಮಾ ಮಾಡಿಕೊಳ್ಳತ್ತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಇಂದಿನಿಂದ ಬೆಂಗಳೂರಿನ ಆನಂದರಾವ್ ಸರ್ಕಲ್ ಹತ್ತಿರವಿರುವ ಮೌರ್ಯ ಹೋಟೆಲ್ ಬಳಿ ಇರುವ ಗಾಂಧಿ ಪ್ರತಿಮೆ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ದೆಹಲಿಯಲ್ಲಿ ತಮಿಳುನಾಡಿನ ರೈತರು ತಿಂಗಳುಗಟ್ಟಲೆ ವಿವಿಧ ರೀತಿಯ ಮನಮುಟ್ಟುವ ಚಳುವಳಿಯನ್ನು ನಡೆಸುತ್ತಿದ್ದಾಗ ಅವರನ್ನು ಸೌಜನ್ಯಕ್ಕೂ ಭೇಟಿಯಾಗದೇ ಕೇಂದ್ರ ಸರ್ಕಾರ ತಾನು ರೈತರ ವಿರೋಧಿ ಎನ್ನುವುದನ್ನು ಈದೇಶದ ಜನಕ್ಕೆ ಸ್ಪಷ್ಟಪಡಿಸಿದೆ ಎಂದರು.

ಸಭೆಯಲ್ಲಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜ್, ಕಾರ್ಯಾಧ್ಯಕ್ಷ ಚುಕ್ಕಿ ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. – (ವರದಿ:ಎಸ್.ಎನ್,ಎಸ್.ಎಚ್)

Leave a Reply

comments

Related Articles

error: